

ಬೆಂಗಳೂರು: ಪರಿಶಿಷ್ಟರ 101 ಜಾತಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ವರ್ಗೀಕರಣ ಮಾಡಿದಂತೆ ಶಾಸನಾತ್ಮಕವಾಗಿ ಮೀಸಲಿಟ್ಟ ಅನುದಾನವನ್ನು ವರ್ಗೀಕರಿಸಬೇಕು ಎಂದು ಮಾದಿಗ ಸಮುದಾಯಗಳ ವಿಶೇಷ ಸಭೆ ಒಕ್ಕೊರಲಿನಿಂದ ಆಗ್ರಹಿಸಿ, ಒಳಮೀಸಲಾತಿ ನಿರ್ಧಾರವೇ ಅವೈಜ್ಞಾನಿಕ ಎಂದು ಆಕ್ಷೇಪಿಸಿದೆ.
ಟೌನ್‌ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಒಳಮೀಸಲಾತಿ ನಂತರ ಮಾದಿಗರ ಮುಂದಿನ ನಡೆಯ ವಿಶೇಷ ಸಭೆ’ ರಾಜ್ಯ ಸರ್ಕಾರದ ಒಳಮೀಸಲಾತಿ ತೀರ್ಮಾನದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಅಂಚಿನ ಸಮುದಾಯಗಳ ಸಾಮಾಜಿಕ ಹಕ್ಕುಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿತು.
ಎಸ್‌ಸಿ ಒಳಮೀಸಲಾತಿ ಕುರಿತು ರಾಜ್ಯ ಸಚಿವ ಸಂಪುಟ ಸಭೆ 19ರಂದು ತೆಗೆದುಕೊಂಡ ನಿರ್ಧಾರ, ಸದನದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಾಮರ್ಶಿಸಿತು.
ನಿಖರ ದತ್ತಾಂಶಗಳು, ಅಂತರ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಅನುಸರಿಸಿ ಎಸ್‌ಸಿ ಮೀಸಲು ವರ್ಗೀಕರಣ ಆಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಸಚಿವ ಸಂಪುಟ ಸಭೆ ಕಡೆಗಣಿಸಿದ್ದು, ಒಳಮೀಸಲಾತಿ ನಿರ್ಧಾರ ದೋಷಪೂರಿತವಾಗಿದೆ ಎಂದು ಸಭೆ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಆಯೋಗವು ಐದು ಗುಂಪುಗಳಲ್ಲಿ 101 ಜಾತಿಗಳನ್ನು ವಿಂಗಡಿಸಿ ಶೇ.17 ಮೀಸಲು ಹಂಚಿಕೆಗೆ ಶಿಾರಸು ಮಾಡಿತ್ತು. ಆದರೆ ರಾಜ್ಯ ಸಚಿವ ಸಂಪುಟ ರಾಜಕೀಯ ಪ್ರೇರಿತ ನಿರ್ಣಯ ಕೈಗೊಂಡು ಸಾಮಾಜಿಕ ನ್ಯಾಯದ ಆಶಯ ಮೂಲೆಗುಂಪು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅತ್ಯಂತ ಹಿಂದುಳಿದ ಎಂದು ಗುರುತಿಸಲಾದ 59 ಸಣ್ಣ ಜಾತಿಗಳ ‘ಎ’ ಪ್ರವರ್ಗವನ್ನು ಅತಿ ಕಡಿಮೆ ಹಿಂದುಳಿದ ‘ಡಿ’ಗುಂಪಿಗೆ ಸೇರಿಸಿರುವ ನಿರ್ಣಯದಲ್ಲಿ ಸುಪ್ರೀಂ ಕೋರ್ಟ್ ಆಶಯ ಕಣ್ಮರೆಯಾಗಿದೆ.
ಅತ್ಯಂತ ಹಿಂದುಳಿದ 59 ಸಣ್ಣ ಜಾತಿಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ ಕೊಡಬೇಕು. ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ, ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ಇದೇ ಮೀಸಲಾತಿ ನಿಗದಿಪಡಿಸಿದ್ದವು. ಆದರೆ ಸರ್ಕಾರ ಪ್ರಬಲ ಜಾತಿಗಳ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜಕೀಯ ನಿರ್ಧಾರ ಕೈಗೊಂಡಿದೆ ಎಂದು ಸಭೆ ಆಕ್ಷೇಪಿಸಿತು.
ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಈ ಮೂರು ಜಾತಿಗಳ ಗೊಂದಲ ಪರಿಹರಿಸುವಲ್ಲಿ ಸರ್ಕಾರ ವಿಲವಾಗಿದೆ. ‘ಇ’ ಗುಂಪಿನಲ್ಲಿದ್ದ ಮೂರು ಜಾತಿಗಳವರು ಪ್ರವರ್ಗ ಎ ಮತ್ತು ಬಿ ಎರಡರಲ್ಲೂ ಮೀಸಲಾತಿ ಪಡೆಯಬಹುದು ಸರ್ಕಾರಿ ಆದೇಶ ಹೇಳಿದೆ.
ಈ ತೀರ್ಮಾನ ಅವೈಜ್ಞಾನಿಕ, ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಗೊಂದಲವನ್ನು ಜೀವಂತವಾಗಿ ಉಳಿಸುವ ಹುನ್ನಾರ ಅಡಗಿದೆ. ಗೊಂದಲಗಳು ಪರಿಹಾರವಾಗುವ ಮೊದಲ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ದುರ್ಬಲ ಜಾತಿಗಳ ಅವಕಾಶ ಕಿತ್ತುಕೊಳ್ಳುತ್ತದೆ ಎಂದು ಸಭೆ ಕಳವಳ ವ್ಯಕ್ತಪಡಿಸಿದೆ.