ಅಂತರಂಗ ಶುದ್ಧಿ ನಿಜವಾದ ಸಾಧನೆ

07ajp03
ಅಜ್ಜಂಪುರದ ಡಣಾಯಕಪುರದಲ್ಲಿ ಏರ್ಪಡಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
Published on

ಅಜ್ಜಂಪುರ: ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುವುದೇ ಶರಣ ಧರ್ಮ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಡಣಾಯಕಪುರದ ಆದಿಶಕ್ತಿ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಏರ್ಪಡಿಸಿದ್ದ ಶ್ರಾವಣ ಸಂಭ್ರಮ, ಮತ್ತೆ ಕಲ್ಯಾಣ ಹಾಗೂ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ, ಅಜ್ಞಾನ ಹೋಗಲಾಡಿಸಿ, ಗುರುಲಿಂಗ, ಜಂಗಮ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಎಂಬ ಅಷ್ಟಾವಳಿಗಳನ್ನು ಪರಿಪಾಲನೆ ಮಾಡಬೇಕು. ವ್ಯಕ್ತ ಭಕ್ತಿಯನ್ನು ಹೊಂದಿ ಭಕ್ತ ಶರಣನಾಗಿ ಪರಿವರ್ತನೆ ಹೊಂದಬೇಕು. ಗುರು ತನ್ನ ಶಿಷ್ಯನಲ್ಲಿ ಸುಜ್ಞಾನ ಬಿತ್ತಿ ಗುರುವಾಗಿ ಮಾಡಬೇಕು ಎಂದರು.
ಬಸವಣ್ಣ ವಿಶ್ವಗುರುವಾಗಲು ಅವರ ವಿನಯವಂತಿಕೆ ಕಾರಣ. ಯಾರಿಗೆ ಅರಿವು-ಆಚಾರವಿರುತ್ತದೆಯೋ ಅವರು ಜಂಗಮ ಸ್ವರೂಪಿ ಎಂದು ಕರೆಸಿಕೊಳ್ಳುತ್ತಾರೆ. ವ್ಯಕ್ತಿಯ ಬಾಹ್ಯ ಸಾಧನೆಗಿಂತ ಅಂತರಂಗ ಶುದ್ಧಿ ಸಾಧನೆ ನಿಜವಾದ ಸಾಧನೆ ಎಂದು ಹೇಳಿದರು.
ಉಪನ್ಯಾಸಕ ಡಾ. ಜಿ.ವಿ.ಮಂಜುನಾಥ್ ಮಾತನಾಡಿ, ವಿಶ್ವದಲ್ಲಿ ಸತ್ಯದ ಮೇಲೆ ನಿಂತಿರುವ ಧರ್ಮ ಲಿಂಗಾಯಿತ ಧರ್ಮ. ಮುಸ್ಲಿಮರು ತಮ್ಮ ದೇವರನ್ನು ನೋಡಲು ಮಸೀದಿಗೆ, ಕ್ರೈಸ್ತ ಧರ್ಮಿಯರು ಚರ್ಚ್‌ಗೆ ಹೋಗುತ್ತಾರೆ.ಆದರೆ ಲಿಂಗಾಯಿತರು ಅಂಗೈಮೇಲೆ ತನ್ನ ದೇವರನ್ನು ಇಟ್ಟುಕೊಂಡು ಪೂಜೆ ಮಾಡುವ ಏಕೈಕ ಧರ್ಮವೆಂದರೆ ಅದು ಲಿಂಗಾಯಿತ ಧರ್ಮ ಮಾತ್ರ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ, ಕೇಂದ್ರ ಸಂಗೀತ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮೀದೇವಮ್ಮ, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ.ಶಿವಮೂರ್ತಿ, ಪ್ರೌಢಶಾಲಾ ಶಿಕ್ಷಕಿ ಮಂಜುಳಾ, ಕೋಶಾಧ್ಯಕ್ಷೆ ಗಾಯತ್ರಮ್ಮ , ಡಿ.ಜಿ.ಮಹೇಶ್ವರಪ್ಪ, ಡಿ.ವಿ.ಗಂಗಾಧರಪ್ಪ , ಡಿ.ಪಿ.ರವಿ, ಮೀನಾ ರಾಜಶೇಖರ್, ಕವಿತಾ ಮಹೇಶ್ವರಪ್ಪ, ಡಿ.ಬಿ.ಭುವನೇಶ್ವರ್, ಡಿ.ಪಿ.ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net