

ಬೆಂಗಳೂರು: ವಿಧಾನಪರಿಷತ್ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ನಡೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವ ಕಾಂಗ್ರೆಸ್, ಆ ಪಕ್ಷ ಮಾಡಬಹುದಾದ ಕ್ಷೇತ್ರವಾರು ಹಾನಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕೇವಲ ಆರು ಕಡೆ ಅಭ್ಯರ್ಥಿ ಹಾಕಿರುವ ಜೆಡಿಎಸ್, ತನ್ನ ಪ್ರಾಬಲ್ಯ ಇಲ್ಲದ ಕಡೆ ಪಕ್ಷದ ಜನಪ್ರತಿನಿಧಿಗಳನ್ನು ಬಳಸಿಕೊಂಡು ತನ್ನ ವಿರುದ್ಧ ಯಾವ ರೀತಿ ದಾಳ ಉರುಳಿಸಬಹುದೆಂಬ ಬಗ್ಗೆ ಕೈ ನಾಯಕರ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ನೆರವು ಪಡೆಯುವ ಬಗ್ಗೆ ಬಿಜೆಪಿ ಪ್ರಮುಖ ನಾಯಕರ ಹೇಳಿಕೆ ಮತ್ತು ಜೆಡಿಎಸ್ ನಾಯಕರ ನಡವಳಿಕೆಯ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದೂ ತಿಳಿದುಬಂದಿದೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅವರ ಪಾರ್ಟಿ, ಅವರ ತತ್ವ, ಅವರ ಸಿದ್ಧಾಂತ, ಯಾರ ಕೈಲಿ ವೋಟು ಹಾಕಿಸಿಕೊಳ್ಳಬೇಕು, ಯಾರಿಗೆ ಹಾಕಿಸಬೇಕು ಎಂಬುದು ಅವರಿಗೆ ಬಿಟ್ಟದ್ದು. ಕೆಲವೊಮ್ಮೆ ಫ್ರೆಂಡ್ಲಿ ಫೈಟ್ ಕೂಡ ನಡೆಯುತ್ತದೆ ಎಂದು ಜೆಡಿಎಸ್ ನಡೆ ಕುರಿತು ಸೂಕ್ಷ್ಮವಾಗಿ ಹೇಳಿದರು.
ಅವರವರ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಅವರದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷದವರೂ ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಾವು 25ಕ್ಕೆ 25 ಅಥವಾ 20 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಶಕ್ತಿ ಮೇಲೆ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಹೆಚ್ಚು ಸಂಖ್ಯೆಗಳನ್ನು ಗೆಲ್ಲುತ್ತೇವೆ ಎಂದಷ್ಟೇ ಹೇಳಬಲ್ಲೆ ಎಂದರು.
ಜೆಡಿಎಸ್ನವರು ಏನು ಬೇಕಾದರೂ ಹೇಳಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಏನು ಹೇಳಿದ್ದರು, ಯಡಿಯೂರಪ್ಪ ಮೊನ್ನೆ ಏನು ಹೇಳಿದ್ದಾರೆ, ಬೊಮ್ಮಾಯಿ ಸಂಪುಟದ ಮಂತ್ರಿಗಳು ಏನೇನು ಮಾತಾಡಿದರು ಎಂಬುದನ್ನು ನೀವೇ ನೋಡಿದ್ದೀರಲ್ಲ? ಇಷ್ಟೆಲ್ಲ ಆದಮೇಲೂ ಅವರು ಹೊಂದಾಣಿಕೆ ಮಾಡಿಕೊಂಡರೆ ಅದು ಅವರ ಸಿದ್ದಾಂತ ಎಂದು ಡಿಕೆಶಿ ಕುಟುಕಿದರು.
ಎಸ್.ಆರ್.ಪಾಟೀಲ್ ಮನವೊಲಿಕೆ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ತಪ್ಪಿಸಿಕೊಂಡು ಅಸಮಾಧಾನಗೊಂಡಿರುವ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶನಿವಾರ ಭೇಟಿ ಮಾಡಿ ರ್ಚಚಿಸಿದ್ದಾರೆ. ‘ಇದು ನಮಗೆ ಕೊನೆಯ ಅವಕಾಶ ಕೊಡಿ’ ಎಂದು ಟಿಕೆಟ್ಗಾಗಿ ಪಾಟೀಲ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಪಾಟೀಲ್ ಕಣಕ್ಕಿಳಿದರೆ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬ ಅಂಶ ಮುಂದಿಟ್ಟುಕೊಂಡು ಅಭ್ಯರ್ಥಿ ಬದಲಿಸಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವೇಳೆ ವಿಜಯಪುರ ಪ್ರಭಾವಿ ನಾಯಕರು ಟಿಕೆಟ್ ತಪ್ಪಿಸಿದರು ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹಿನ್ನೆಡೆಯಾಗಬಾರದೆಂದು ಎಸ್.ಆರ್.ಪಾಟೀಲ್ ಮನವೊಲಿಸಲು ಡಿಕೆಶಿ ಪ್ರಯತ್ನಿಸಿದ್ದಾರೆ. ಮುಂದಿನ ದಿನದಲ್ಲಿ ಪಕ್ಷದಿಂದ ಸೂಕ್ತ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ದೂರಾಲೋಚನೆಯಿಂದ ಪಕ್ಷದ ತೀರ್ಮಾನ ಕೈಗೊಂಡು ಬೇರೆಯವರಿಗೆ ಟಿಕೆಟ್ ನೀಡಿದೆ. ಎಸ್.ಆರ್.ಪಾಟೀಲ ಅವರಿಗೇನು ಅಸಮಾಧಾನ ಇಲ್ಲ. ಜಿಲ್ಲೆ ಜನರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಬೇಸರ ತರಿಸಿರಬಹುದು.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಪಕ್ಷ ತಾಯಿ ಸಮಾನ. ಪಕ್ಷದ ತೀರ್ವನವನ್ನು ಗೌರವಿಸುತ್ತೇನೆ. 45 ವರ್ಷ ಕಾಂಗ್ರೆಸ್ನ ಶಿಸ್ತಿನ ಸಿಪಾಯಿ, ನನಗೆ ಅಸಮಾಧಾನ ಇಲ್ಲ. ಕಾರ್ಯಕರ್ತರಿಗೆ ಅಸಮಾಧಾನ ಅನಿಸಿರಬಹುದು.
| ಎಸ್.ಆರ್.ಪಾಟೀಲ್ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ