ಎರಡೇ ದಿನಕ್ಕೆ ಕಿತ್ತು ಬಂದ ಇಂಟರ್ ಲಾಕ್ ಟೈಲ್ಸ್

Inter Lock Tiles from CMC. 12,TPT-2 (1)
Published on

ತಿಪಟೂರು: ನಗರದ ಪಾದಚಾರಿ ರಸ್ತೆಯಲ್ಲಿ ಅಳವಡಿಸುತ್ತಿರುವ ಇಂಟರ್ ಲಾಕ್ ಟೈಲ್ಸ್ ಒಂದೆಡೆ ಕಿತ್ತು ಬರುತ್ತಿದ್ದರೆ, ಇನ್ನೊಂದೆಡೆ ಕಾಮಗಾರಿ ಮುಂದುವರಿದಿದೆ.


ನಗರಸಭೆಯ ವಿಶೇಷ ಅನುದಾನದಲ್ಲಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ರೈಲ್ವೆ ಸ್ಟೇಷನ್ ರಸ್ತೆ, ಜೇನುಕಲ್ ನಸಿರ್ಂಗ್ ಹೋಂ ರಸ್ತೆ ಮತ್ತು ಕಾರೋನೇಷನ್ ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಟೈಲ್ಸ್ ಅಳವಡಿಸಿ ರಸ್ತೆಯ ಸೌಂದರ್ಯ ಹೆಚ್ಚಿಸಲು ಮುಂದಾಗಿದ್ದು, ವಿಪರ್ಯಾಸವೆಂದರೆ ಟೈಲ್ಸ್ ಅಳವಡಿಸಿಕೊಂಡು ಮುಂದೆ ಹೋದಂತೆಲ್ಲಾ, ಹಿಂದೆ ಅಳವಡಿಸಿರುವ ಟೈಲ್ಸ್‌ಗಳು ಕಿತ್ತು ಬರುತ್ತಿವೆ. ಕಳೆದ ಶನಿವಾರ ಅಳವಡಿಸಲಾದ ಟೈಲ್ಸ್‌ಗಳು ಎರಡೇ ದಿನಕ್ಕೆ ಕಿತ್ತು ಬಂದಿವೆ. ಕಣ್ಣೆದುರೇ ಟೈಲ್ಸ್‌ಗಳು ಕಿತ್ತುಬಂದಿರುವುದು ಕಾಣುತ್ತಿದ್ದರೂ, ಕಾಮಗಾರಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.


ಇತ್ತೀಚೆಗೆ ನಗರದ ರಾಷ್ಟ್ರೀಯ ಹೆದ್ದಾರಿ ಬದಿ ಇದೇ ರೀತಿ ಇಂಟರ್ ಲಾಕ್ ಟೈಲ್ಸ್ ಅಳವಡಿಕೆ ಸಂದರ್ಭದಲ್ಲಿ ಮೊದಲು ವೆಟ್ ಮಿಕ್ಸ್ ಹಾಕಿ, ರೋಲರ್ ಮೂಲಕ ಭೂಮಿ ಗಟ್ಟಿಗೊಳಿಸಿ, ಆ ನಂತರ ಟೈಲ್ಸ್ ಅಳವಡಿಸಿ, ಇದರ ಮೇಲೆ ಮರಳು ಭರ್ತಿ ಮಾಡಿ ಟೈಲ್ಸ್‌ಗಳು ಬಿಗಿಯಾಗಿರುವಂತೆ ಕಾಮಗಾರಿ ಮಾಡಲಾಗಿದೆ. ಆದರೆ, ಪ್ರಸ್ತುತ ನಡೆದಿರುವ ಕಾಮಗಾರಿಯಲ್ಲಿ ಇದ್ಯಾವುದನ್ನೂ ಮಾಡಿಲ್ಲ.


ಈ ಬಗ್ಗೆ ಪ್ರತಿಕ್ರ್ರಿಯಿಸಿರುವ ನಗರಸಭೆ ಅಧಿಕಾರಿಗಳು, ಕಾಮಗಾರಿಯಲ್ಲಿ ವೆಟ್ ಮಿಕ್ಸ್ ಬಳಕೆ, ರೋಲರ್ ಅಥವಾ ವೈಬ್ರೇಟರ್‌ಗೆ ವಿನಾಯಿತಿ ನೀಡಲಾಗಿದೆ. ಕೇವಲ ಎಂ ಸ್ಯಾಂಡ್ ಹಾಕಿ, ಇದರ ಮೇಲೆ ಟೈಲ್ಸ್ ಅಳವಡಿಸಿದ ನಂತರ ಪುನಃ ಎಂ.ಸ್ಯಾಂಡ್ ಹಾಕಿ ಕಾಂಪ್ಯಾಕ್ಟ್ ಮಾಡಿದರೆ ಟೈಲ್ಸ್‌ಗಳು ಗಟ್ಟಿಯಾಗಿ ಲಾಕ್ ಆಗುತ್ತವೆ ಎನ್ನುತ್ತಾರೆ. ಅಳವಡಿಸಲಾಗಿರುವ ಟೈಲ್ಸ್ ಗಳು ಕಿತ್ತು ಬರುತ್ತಿರುವ ಬಗ್ಗೆ ಪ್ರಶ್ನಿಸಿದರೆ, ಇನ್ನೂ ಕಾಂಪ್ಯಾಕ್ಟ್ ಅಗಿಲ್ಲದ ಕಾರಣ, ಲಾರಿ ಹರಿದು ಟೈಲ್ಸ್‌ಗಳು ಕಿತ್ತು ಬಂದಿವೆ. ಸರಿಪಡಿಸಲು ಹೇಳಿದ್ದೇವೆ ಎನ್ನುತ್ತಾರೆ. ಒಂದೇ ರೀತಿಯ ಟೈಲ್ಸ್ ಅಳವಡಿಕೆಗೆ ರಾಷ್ಟ್ರಿಯ ಹೆದ್ದಾರಿಗೊಂದು ನಿಯಮ, ನಗರದೊಳಗಿನ ರಸ್ತೆಗಳಿಗೊಂದು ನಿಯಮ ಎಂಬಂತಾಗಿದೆ.


ಅಧಿಕಾರಿಗಳಿಗೆ ಮಳೆ ನೆಪ: ನಗರದ ಪ್ರವೇಶದ್ವಾರದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೈ-ಪಾಸ್ ರಸ್ತೆ ಗುಂಡಿ ಬಿದ್ದು, ಹಲವಾರು ಮಂದಿ ಬಿದ್ದು ಎದ್ದಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆ ಬೈಕ್ ಸವಾರ ಬಿದ್ದು ಮೃತಪಟ್ಟಿದ್ದಾನೆ. ರಸ್ತೆ ನಿರ್ಮಾಣಕ್ಕೆ ಸಚಿವ ಬಿ.ಸಿ.ನಾಗೇಶ್ ಭೂಮಿ ಪೂಜೆ ನೆರವೇರಿಸಿ ತಿಂಗಳುಗಳೇ ಆಗಿದ್ದರೂ, ಮಳೆ ನೆಪದಲ್ಲಿ ರಸ್ತೆ ಕಾಮಗಾರಿ ಮುಂದೂಡುತ್ತಿರುವ ನಗರಸಭೆ, ಅನಗತ್ಯವಾಗಿ ರಸ್ತೆಗಳ ಸೌಂದರ್ಯಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿತ್ತೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.


ಟೈಲ್ಸ್ ಅಳವಡಿಕೆ ಕಾರ್ಯವನ್ನು ಹಂತ, ಹಂತವಾಗಿ ಕೈಗೊಂಡು, ಒಂದು ಕಡೆ ಕಾಮಗಾರಿ ಸಂಪೂರ್ಣವಾಗಿ ಮುಗಿಸಿದ ನಂತರ ಇನ್ನೊಂದು ಬದಿಯ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ವಹಿಸಲಾಗುವುದು.
-ಪಿ.ಜೆ.ರಾಮ ಮೋಹನ್ ನಗರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net