

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಲಭಿಸಿದೆ. ಕೇಂದ್ರ ಸರ್ಕಾರಕ್ಕೆ ಜಾತಿ ಗಣತಿ ಅಧಿಕಾರವಿದೆ ಎಂದ ಸುಪ್ರೀಂ ಕೋರ್ಟ್, ಬಿಹಾರದ ಜಾತಿ ಗಣತಿಗೆ ತಡೆಯಾಜ್ಞೆ ನೀಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ನಡೆಯೇ ಉಲ್ಟಾ ಆಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಪರಾಮರ್ಶೆ ಎಂದು ಆದೇಶ ಹೊರಡಿಸಿ, ಸಮೀಕ್ಷಾ ವರದಿ ಕೈಸೇರಿದ ಬಳಿಕ ಜಾತಿ ಗಣತಿ ಎಂದು ರಾಜ್ಯ ಸರ್ಕಾರ ಲೇಪನ ಮಾಡುತ್ತಿದೆ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್.ಕಾಂತರಾಜು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಈ ಸಮೀಕ್ಷೆ ಸಮರ್ಪಕವಾಗಿಲ್ಲ. ಸರಿಯಾಗಿ ಕ್ಷೇತ್ರ ಕಾರ್ಯ, ದತ್ತಾಂಶ, ಅಂಕಿ-ಸಂಖ್ಯೆ, ಮಾಹಿತಿ ಸಂಗ್ರಹಿಸದೇ ವರದಿ ತಯಾರಿಸಿದ ಕಾರಣಕ್ಕೆ ಅವೈಜ್ಞಾನಿಕವೆಂದು ಆಯೋಗದ ಅಂದಿನ ಕಾರ್ಯದರ್ಶಿ ಹಾಗೂ ಸದಸ್ಯರಿಬ್ಬರು ಸಹಿ ಮಾಡಿದ್ದಿಲ್ಲ ಎಂದರು.
ನಂತರ ಆಯೋಗದ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಕ್ಷೇತ್ರ ಕಾರ್ಯ, ಸ್ಥಳಕ್ಕೆ ಭೇಟಿ ಯಾವುದನ್ನೂ ಮಾಡದೆ ತರಾತುರಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ತಯಾರಿಸಿ, ಕಾಂತರಾಜು ವರದಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಎಂದು ಹೇಳಿಕೊಂಡಿದ್ದು, ಅದೊಂದು ಅವಾಸ್ತವಿಕ, ಅರ್ಥಹೀನ ಪ್ರಯತ್ನವೆಂದು ಆಕ್ಷೇಪಿಸಿದರು.
ಹಗರಣಗಳು, ಅಕ್ರಮದ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ. ಅದರಿಂದ ಹೊರಬರಲು, ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರ ಮುಂದಿಟ್ಟಿದ್ದಾರೆ. ನಾನೇ ವರದಿ ನೋಡಿಲ್ಲ, ಅವೈಜ್ಞಾನಿಕವೆಂದು ಹೇಗೆ ಹೇಳುತ್ತೀರಿ ? ಎಂದು ಪ್ರಶ್ನಿಸುತ್ತಿದ್ದಾರೆ. ನೋಡದ ವರದಿ ಬಗ್ಗೆ ಅಷ್ಟೊಂದು ಆಸಕ್ತಿ ಏಕೆ ?. ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಸಾರ್ವಜನಿಕ ಚರ್ಚೆಗೆ ಬಿಡಿ ಎಂದು ಬೊಮ್ಮಾಯಿ ಆಗ್ರಹಿಸಿದರು.
ನಾಡಿನ ಕೋಟ್ಯಂತರ ಜನರ ಬದುಕು, ಮಕ್ಕಳ ಭವಿಷ್ಯದ ಪ್ರಶ್ನೆಯಿದು. ಅನೇಕ ಸಮುದಾಯಗಳು ಸಮೀಕ್ಷೆ ಬಗ್ಗೆ ಅನುಮಾನ, ಅವೈಜ್ಞಾನಿಕ ಎನ್ನುತ್ತಿವೆ. ಆಡಳಿತ ಪಕ್ಷದ ಒಳಗಿನ ಅನೇಕರು ಅಪಸ್ವರ ಎತ್ತಿದ್ದಾರೆ.
ಆದರೂ ರಾಜ್ಯ ಸರ್ಕಾರ ಅತಿಯಾದ ಆಸಕ್ತಿ ತೋರಿಸುತ್ತಿದ್ದು, ಪ್ರಾಮಾಣಿಕ ಕಾಳಜಿಗಿಂತ ಬೇರೇನೋ ಇದ್ದಂತಿದೆ. ಸಾರ್ವಜನಿಕ ಚರ್ಚೆ ಕಾಲಕ್ಕೆ ಲೋಪದೋಷಗಳು ತಿಳಿಯುತ್ತವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಆಗುವ ಕಷ್ಟ-ನಷ್ಟ ಏನು ? ಎಂದು ಖಾರವಾಗಿ ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ, ಎಸ್ ಸಿ ಮೀಸಲು ವರ್ಗೀಕರಣ, ಪಂಚಮಸಾಲಿ ಸಮುದಾಯದವರಿಗೆ ಪ್ರವರ್ಗ 2ಡಿಗೆ ಸೇರ್ಪಡೆ, ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ರದ್ದು ಸೇರಿ ಎಲ್ಲವನ್ನು ನನ್ನ ಅವಧಿಯಲ್ಲಿ ಸಂವಿಧಾನಬದ್ಧವಾಗಿ ತೀರ್ಮಾನ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಕೈಗೊಂಡ ಈ ನಿರ್ಧಾರಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನ ಕೆಲವರು ಸುಪ್ರೀಂ ಕೋರ್ಟ್ ಗೆ ಮೊರೆ ಹೋದರು.
ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಮುಂದಿನ ವಿಚಾರಣೆವರೆಗೆ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದ್ದನ್ನು ಸುಪ್ರೀಂ ಕೋರ್ಟ್ ಒಪ್ಪಿದೆಯೇ ಹೊರತು ತಡೆಯಾಜ್ಞೆ ನೀಡಿಲ್ಲವೆಂದು ಬೊಮ್ಮಾಯಿ ಸಮಜಾಯಿಷಿ ನೀಡಿದರು.
ಎಸ್ ಸಿ, ಎಸ್ ಟಿ ಮೀಸಲು ಹೆಚ್ಚಳ, ಎಸ್ ಸಿ ಒಳಮೀಸಲು, ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲು ಕೊಡುವ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನೈಜ ಕಾಳಜಿಯಿದ್ದರೆ ಈ ನಿಟ್ಟಿನಲ್ಲಿ ಮುಂದುವರಿಯಬೇಕು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ತಪ್ಪು ಮಾಹಿತಿ ನೀಡಿ ವಿವಿಧ ಸಮುದಾಯಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ಮಾಡಿದರು.
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನನ್ನ ಮಗ ಸ್ಪರ್ಧಿಸುವುದು ಬೇಡವೆಂಬ ವೈಯಕ್ತಿಕ ನಿರ್ಧಾರ ಕೈಗೊಂಡು, ಸ್ಥಳೀಯರಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ವೇಳೆ ನನ್ನ ಮನದಾಳದ ಮಾತನ್ನು ನಿವೇದಿಸಿಕೊಂಡಿದ್ದು, ವರಿಷ್ಠರ ಒತ್ತಡ, ವಿಶ್ವಾಸಕ್ಕೆ ಕಟ್ಟುಬಿದ್ದು ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ರಾಜಕೀಯ, ಪಕ್ಷ, ಕ್ಷೇತ್ರದ ಬಗ್ಗೆ ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇವೆ. ನಿಮ್ಮೊಬ್ಬರ ಸಲುವಾಗಿ 44 ವಿಧಾನಸಭಾ ಕ್ಷೇತ್ರಗಳ ಆಯ್ಕೆ ನಿಂತಿದೆ ಎಂದು ಪಟ್ಟಿಯನ್ನು ಕೈಗಿತ್ತ ನಡ್ಡಾ ಲೆಕ್ಕಾಚಾರ ಮನವರಿಕೆ ಮಾಡಿಕೊಟ್ಟರೆ, ನಂತರ ಅಮಿತ್ ಷಾ ಅವರು ಕರೆ ಮಾಡಿ ಹೆಚ್ಚು ಯೋಚಿಸದೆ, ಮೂರು ಕ್ಷೇತ್ರಗಳಲ್ಲಿ ಶ್ರಮಿಸಲು ಹೊರಡಿ ಎಂಬ ಸಲಹೆ ನೀಡಿದರು ಎಂದು ಬೊಮ್ಮಾಯಿ ವಿವರಿಸಿದರು.