ಫೆ.2ಕ್ಕೆ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

SANEHALLI SWAMIJI 1
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Published on

ಚಿಕ್ಕಮಗಳೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಗಡಿಗ್ರಾಮ ಸಾಣೆಹಳ್ಳಿ ಮಠದಲ್ಲಿ ಫೆ.2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಕಸಾಪದಿಂದ ಈವರೆಗೆ ಎಲ್ಲಿಯೂ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಿರಲಿಲ್ಲ. ಇದೇ ಮೊದಲ ಬಾರಿಗೆ ನಾವು ಹೊಸ ಪ್ರಯತ್ನ ಮಾಡಿದ್ದೇವೆ. ಕಸಾಪ ಕೇಂದ್ರ ಸಮಿತಿಯಿಂದ ಯಾವುದೇ ಅನುದಾನ ಪಡೆಯದೆ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮ್ಮೇಳನಾಧ್ಯಕ್ಷರಾಗಿ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಫೆ.2ರಂದು ಬೆಳಗ್ಗೆ 9.30ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಗುವುದು. ಶ್ರೀಗಳು ಬರೆದಿರುವ ಪುಸ್ತಕಗಳನ್ನೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ ನಾಡ ಧ್ವಜಾರೋಹಣ ನೆರವೇರಿಸುವರು. ಕೋಶಾಧ್ಯಕ್ಷ ಆರ್.ಮಲ್ಲಿಕಾರ್ಜುನ್ ಪರಿಷತ್ ಧ್ವಜಾರೋಹಣ ನಡೆಸಲಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ್ ಜೋಷಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು ಎಂದರು.
ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಬೆಳಕಿನೆಡೆಗೆ ಎಂಬ ಕೃತಿಯನ್ನು, ಎರಡು ಜಿಲ್ಲೆಗಳ ಯುವ ಲೇಖಕರ ಪುಸ್ತಕಗಳನ್ನು ಮಾಜಿ ಸಂಸದ ಚಂದ್ರಪ್ಪ ಬಿಡುಗಡೆ ಮಾಡುವರು. ವಿವಿಧ ವಿಷಾರಗೋಷ್ಠಿಗಳು ನಡೆಯಲಿವೆ. ಜತೆಗೆ ಸಮ್ಮೇಳನಕ್ಕೆ ಬಂದ ಅತಿಥಿಗಳಿಗೆ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಪ್ರಮುಖರಾದ ಗುರುವೇಶ್, ಸೋಮಶೇಖರ್, ಪವನ್, ಎಚ್.ಆರ್.ಚಂದ್ರಪ್ಪ, ಸಚಿನ್ ಸಿಂಗ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net