

ಬೆಂಗಳೂರು: ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಎಸ್ಡಿಪಿಐನ 6 ಕಾರ್ಯಕರ್ತರ ಹಿಂದಿರುವ ಸೂತ್ರಧಾರ ಹಾಗೂ ಅವರಿಗೆ ಹಣಕಾಸು ನೆರವು ನೀಡುತ್ತಿದ್ದ ಭೂಗತ ಕೈಗಳ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಡಿ. 22ರಂದು ಆರ್ಎಸ್ಎಸ್ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್ ಅಕ್ಬರ್, ಅಕ್ಬರ್ ಬಾಷಾ, ಸನಾವುಲ್ಲಾ ಷರೀಫ್ ಮತ್ತು ಸಾಧಿಕ್ ಉಲ್ ಅಮೀನ್ ವಿಚಾರಣೆ ವೇಳೆ ದೊಡ್ಡ ಮಟ್ಟದ ಸಂಚು ಬಯಲಾಗಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ವಾಗ್ಮಿ ಚಕ್ರವರ್ತಿ ಸೂಲೆಬೆಲೆ ಹತ್ಯೆ ಸಂಚಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸಂಚಿನ ಹಿಂದಿರುವ ‘ಮಾಸ್ಟರ್ ಮೈಂಡ್’ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರ ಜತೆ ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಮತ್ತು ಸಿಸಿಬಿಯ ಉಗ್ರ ನಿಗ್ರಹ ದಳ(ಎಟಿಎಸ್) ಕಾರ್ಯಾಚರಣೆ ಆರಂಭಿಸಿವೆ. ಆರೋಪಿಗಳು ಕೃತ್ಯ ಎಸಗುವ ತಂಡದ ಸದಸ್ಯರಾಗಿದ್ದು, ಸಂಚಿನ ಹಿಂದಿರುವ ಕಾಣದ ಕೈಗಳು ಬೆಳಕಿಗೆ ಬರಬೇಕಿದೆ. ಕೃತ್ಯಕ್ಕೆ ಆರ್ಥಿಕ ನೆರವು ಮತ್ತು ಆರೋಪಿಗಳಿಗೆ ತರಬೇತಿ, ಕೃತ್ಯದ ಬಳಿಕ ಅವರು ಎಲ್ಲಿ ಉಳಿದುಕೊಂಡಿದ್ದರು? ಯಾರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ? ಈ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಇದೊಂದು ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲವಾಗಿದೆ. ಇವರಿಗೆ ಪ್ರತಿ ತಿಂಗಳು 10 ಸಾವಿರ ರೂ. ವೇತನ ನೀಡುತ್ತಿದ್ದವರು ಯಾರು ಎಂಬ ಮಾಹಿತಿ ಬೆಳಕಿಗೆ ಬರಬೇಕಿದೆ. ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಡುತ್ತಿಲ್ಲ. ತನಿಖೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಪ್ರಕರಣ ಮರುತನಿಖೆ?: ಬಂಧಿತರ ಪೈಕಿ ನಾಲ್ವರು ಆರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮೈಸೂರಿನ ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಇವರು ಕೈ ಜೋಡಿಸಿದ್ದರು. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಕಾರು ಸುಟ್ಟು ಹಾಕಿದ್ದರು. ಕೆಲ ಪ್ರಕರಣಗಳಲ್ಲಿ ಸಾಕ್ಷ್ಯ ಸಿಗದೆ ಸಿ ರಿಪೋರ್ಟ್ ಸಲ್ಲಿಸಲಾಗಿತ್ತು. ಇದೀಗ ಆರೋಪಿಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಹಳೆಯ ಕೇಸುಗಳನ್ನು ಮತ್ತೆ ತನಿಖೆ ನಡೆಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.