

ನವದೆಹಲಿ: ಕಳೆದ ಮೂರುದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಬಣಗಳ ಪ್ರತಿಭಟನೆ ನಡೆಯುತ್ತಿದೆ.
ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರು, ರಕ್ಷಣಾ ಸಿಬ್ಬಂದಿ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡುತ್ತಿದೆ. ಕಲ್ಲು ತೂರಾಟ, ಆ್ಯಸಿಡ್ ದಾಳಿ ಮಾಡುತ್ತಿದೆ.
ಈ ಗಲಭೆಯಲ್ಲಿ ಪೊಲೀಸ್ ಪೇದೆಯೊಬ್ಬ ಮೃತಪಟ್ಟಿದ್ದು ವರದಿಯಾಗಿದೆ. ನಿನ್ನೆ ಪ್ಯಾರಾಮಿಲಿಟರಿ ಸೈನಿಕನೋರ್ವನ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಇಂದು ಬೆಳಗ್ಗೆ ಗುಪ್ತಚರ ಇಲಾಖೆ ಅಧಿಕಾರಿಯೋರ್ವನ ಮೃತದೇಹ ಮೋರಿಯಲ್ಲಿ ಪತ್ತೆಯಾಗಿದೆ.
ಈ ಮೃತ ಅಧಿಕಾರಿಯನ್ನು ಅಂಕಿತ್ ಶರ್ಮಾ ಎಂದು ಗುರುತಿಸಲಾಗಿದೆ. ಅಂಕಿತ್ ಶರ್ಮಾ ಮಂಗಳವಾರ ಸಂಜೆ ಮನೆಗೆ ಹೋಗುತ್ತಿದ್ದಾಗ, ಚಾಂದ್ ಬಾಘ್ ಸೇತುವೆ ಮೇಲೆ ಅವರ ಮೇಲೆ ಪ್ರತಿಭಟನಾಕಾರರ ಗುಂಪು ಹಲ್ಲೆ ಮಾಡಿದೆ. ಈ ವೇಳೆ ಮೃತಪಟ್ಟ ಅವರನ್ನು ಮೋರಿಯೊಳಗೆ ಎಸೆದು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರದಿಂದಲೂ ಕಾಣೆಯಾಗಿದ್ದ ಅಂಕಿತ್ ಶರ್ಮಾರನ್ನು ಮನೆಯವರು ಹುಡುಕುತ್ತಿದ್ದರು. ಇಂದು ಮೃತದೇಹ ಸಿಕ್ಕಬಳಿಕ ಮಾತನಾಡಿದ ಅಂಕಿತ್ ಅವರ ತಂದೆ ರವೀಂದ್ರ ಶರ್ಮಾ, ತಮ್ಮ ಮಗನ ಮೇಲೆ ಹಲ್ಲೆ ನಡೆಸಿದವರು ಆಮ್ ಆದ್ಮಿ ಪಾರ್ಟಿ ಬೆಂಬಲಿಗರು ಎಂದು ಆರೋಪಿಸಿದ್ದಾರೆ.