

| ದೇವರಾಜ್ ಕನಕಪುರ ಬೆಂಗಳೂರು
ಕರೊನಾ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲಾ ತರಗತಿಗಳನ್ನು ಆರಂಭಿಸುವ ಕುರಿತಂತೆ ತೀರ್ಮಾನ ಹೊರಬೀಳುವ ಮುನ್ನವೇ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನನ್ವಯ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಶಾಲೆಗಳು ಚಿಂತನೆ ನಡೆಸಿವೆ. ಶಾಲೆ ಆರಂಭಕ್ಕೆ ಮುನ್ನವೇ ವಿದ್ಯಾರ್ಥಿಗಳು ಆರೋಗ್ಯ ವಿಮೆ ಹೊಂದುವುದು ಕಡ್ಡಾಯವೆಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಜ್ಞರ ಸಮಿತಿ ಉಲ್ಲೇಖಿಸಿದೆ.
ರಾಜ್ಯ ಸರ್ಕಾರ ಎಲ್ಲ ರೀತಿಯ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಶಿಕ್ಷಕರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅಲ್ಲದೆ, ಭೌತಿಕ ತರಗತಿಗಳನ್ನು ಆರಂಭಿಸುವ ಮುನ್ನ ಶಾಲಾ ಮಕ್ಕಳಿಗೆ ಕನಿಷ್ಠ 2 ಲಕ್ಷ ರೂ. ಮೌಲ್ಯದ ಕರೊನಾ ಆರೋಗ್ಯ ವಿಮೆ ಮಾಡಿಸಬೇಕು. ಏಕೆಂದರೆ, ಕರೊನಾ 3ನೇ ಅಲೆ ಅತಿವೇಗವಾಗಿ ಹರಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಕರೊನಾ ವಿಮೆ ಇದ್ದ ಪಕ್ಷದಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಇಲ್ಲವಾದರೆ, ಮುಂದೆ ಕಷ್ಟವಾಗಬಹುದು ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ಕೆಲವು ವಿವಿಗಳಲ್ಲಿ ಜಾರಿ: ಆರೋಗ್ಯ ವಿಮೆಗಳಲ್ಲಿ ಕರೊನಾ ಚಿಕಿತ್ಸೆ ಇಲ್ಲದೆ ಇರುವುದರಿಂದ ಪ್ರತ್ಯೇಕವಾಗಿ ಕರೊನಾ ವಿಮೆ ಮಾಡಿಸಬೇಕಾಗಿದೆ. ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಸಾಮೂಹಿಕ ವಿಮೆ ಮಾಡಿಸುವುದರಿಂದ ವಿಮೆಯ ಪ್ರೀಮಿಯಂ ಕಡಿಮೆಯಾಗುತ್ತದೆ. ಇನ್ನು, ಪಾಲಕರೇ ನೇರವಾಗಿ ಮಕ್ಕಳಿಗೆ ಕರೊನಾ ವಿಮೆ ಮಾಡಿಸುವುದು ಕೂಡ ಉತ್ತಮವಾದ ಆಲೋಚನೆಯಾಗಿದೆ. ಒಟ್ಟಾರೆ, ಭೌತಿಕ ತರಗತಿ ಆರಂಭಕ್ಕೂ ಮುನ್ನ ವಿಮೆ ಇದ್ದರೆ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ. ವಿದ್ಯಾರ್ಥಿಗಳಿಗೆ ವಿಮೆ ನೀಡುವುದು ಹೊಸದಾದ ಪ್ರಯೋಗವೇನಲ್ಲ. ಸದ್ಯ ರಾಜ್ಯದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆಯನ್ನು ವಿವಿಯ ವತಿಯಿಂದಲೇ ನೀಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಕಳೆದ ಮೂರá- ನಾಲ್ಕು ವರ್ಷಗಳಿಂದ ವಿಮೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಶಾಲೆ ಆರಂಭಕ್ಕೆ ದೇವಿ ಶೆಟ್ಟಿ ಸಮಿತಿ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಮೊದಲು ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಲಸಿಕೆ ಹಾಗೂ ವಿಮೆ ಒದಗಿಸುವ ಕಡೆ ಸರ್ಕಾರ ಗಮನ ನೀಡಬೇಕು.
| ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್್ಸ ಸಂಘಟನೆ
ರಾಜ್ಯದಲ್ಲಿ ಜುಲೈ1ರಿಂದ ಶಾಲೆಗಳನ್ನು ಆರಂಭಿಸಬೇಕೆ ಬೇಡವೇ ಎಂಬುದರ ಬಗ್ಗೆ ಸೋಮವಾರದ (ಜೂ.28) ಒಳಗೆ ತೀರ್ವನಿಸ ಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ವಿದ್ಯಾಗಮ ಅನುಷ್ಠಾನದ ಬಗ್ಗೆ ಸಲಹೆ-ಸೂಚನೆ ಪಡೆಯಲು ಶುಕ್ರವಾರ ವಿವಿಧ ಸಂಘ-ಸಂಸ್ಥೆಗಳ ಜತೆಗೆ ಸಭೆ ನಡೆಸಿದ ಸುರೇಶ್ ಕುಮಾರ್, ಶಾಲೆ ಆರಂಭಿಸುವುದಕ್ಕಿಂತ ಶೈಕ್ಷಣಿಕ ಚಟುವಟಿಕೆ ಶುರುಮಾಡುವುದೇ ನಮ್ಮ ಉದ್ದೇಶ ಎಂದರು. ಶಾಲಾ ಆರಂಭದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ ನಿರ್ಧಾರಕ್ಕೆ ಬರಲಾಗುವುದು. ಭೌತಿಕ ತರಗತಿಗಳ ವಿಷಯದಲ್ಲಿ ಆರೋಗ್ಯ ಇಲಾಖೆಯ ಸಲಹೆ ಪಡೆದೇ ಮುಂದುವರಿಯಲಾಗುವುದೆಂದು ಸ್ಪಷ್ಟಪಡಿಸಿದರು.
ಕಾರ್ಯಪಡೆ ರಚನೆ: ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಜಾರಿಗೆ ತರುವ ಸಂಬಂಧ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ಪಡೆಯಲು ಕಾರ್ಯಪಡೆ ರಚಿಸುವುದಾಗಿಯೂ ಸಚಿವರು ತಿಳಿಸಿದರು. ಕರೊನಾ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ನಿರಂತರತೆ, ಕಲಿಕಾ ಸಾಮಗ್ರಿ, ಮೌಲ್ಯಮಾಪನ ಕುರಿತು ಕಾಲಕಾಲಕ್ಕೆ ಸಲಹೆ ನೀಡಲು ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಕಾರ್ಯಪಡೆ ರಚಿಸಿ, ವಿದ್ಯಾರ್ಥಿ ಕಲಿಕೆಯ ಪರಾಮರ್ಶೆಗೆ ನಿರಂತರ ಸೂತ್ರವನ್ನು ರಚಿಸಲಾಗುವುದೆಂದು ಸಚಿವರು ವಿವರಿಸಿದರು.
ಸ್ಕೂಲ್ ಅನ್ಲಾಕ್: ಮಕ್ಕಳು ಬಹುಕಾಲ ಶಾಲೆಯಿಂದ ಹೊರಗುಳಿದಿರುವುದರಿಂದ ಪಾಲಕರು ಮತ್ತು ಮಕ್ಕಳು ಶಾಲೆಗೆ ಬರಲು ಕಾತರರಾಗಿರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ ಎಂದು ಕೆಲ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಪ್ರತಿಪಾದಿಸಿದ್ದಾರೆ. ವಿದ್ಯಾಗಮ ಕಾರ್ಯಕ್ರಮ ಆರಂಭಕ್ಕೂ ಸಲಹೆಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.
ನಿರಂತರ ಮೌಲ್ಯಾಂಕನ: ಕೋವಿಡ್ನಂತಹ ಸಂದರ್ಭದಲ್ಲಿ ಮಕ್ಕಳ ಮೌಲ್ಯಾಂಕನ ಮಾಡಲು ಅನುಕೂಲವಾಗುವಂತೆ ಈ ವರ್ಷದಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ನಿರಂತರ, ತ್ರೖೆಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಮೌಲ್ಯಾಂಕನ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕೆಂಬ ಕುರಿತು ಚಿಂತನೆ ನಡೆಸಲಾಗಿದ್ದು, ಈ ಕುರಿತಂತೆಯೂ ಕಾರ್ಯಪಡೆ ವರದಿ ನೀಡಲಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ 28ರಂದು ಚರ್ಚೆ: ಸುರಕ್ಷಿತ ವಾತಾವರಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧ ಜೂ. 28ರಂದು ಸಭೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಜುಲೈ 1ರಿಂದ ಶಾಲೆಗಳನ್ನು ಆರಂಭಿಸಬೇಕಾ ಬೇಡವಾ ಎನ್ನುವ ಬಗ್ಗೆ ಸೋಮವಾರದ ಒಳಗೆ ತೀರ್ಮಾನ ಮಾಡುತ್ತೇವೆ. ಶಾಲೆ ಆರಂಭಕ್ಕಿಂತ ಶೈಕ್ಷಣಿಕ ಚಟುವಟಿಕೆ ಶುರುಮಾಡುವುದು ನಮ್ಮ ಉದ್ದೇಶ.
| ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
31ರೊಳಗೆ ಪಿಯು ಫಲಿತಾಂಶ: ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಜುಲೈ 31ರೊಳಗೆ ಫಲಿತಾಂಶ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಶೀಘ್ರ ಎಸ್ಸೆಸ್ಸೆಲ್ಸಿ ವೇಳಾಪಟ್ಟಿ: ಶೀರ್ಘದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಕೋವಿಡ್ ಕಾರ್ಯಪಡೆ ನೀಡಿರುವ ಮಾರ್ಗಸೂಚಿ ಅನುಸಾರ ಸಿದ್ಧತೆಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷೆ ಸಂಬಂಧ ಅಧಿಕಾರಿಗಳ ಕರ್ತವ್ಯಗಳ ಬಗ್ಗೆಯೂ ಆದೇಶ ಮಾಡಲಾಗಿದೆ ಎಂದರು.
ಶುಲ್ಕ ವಿಚಾರ: ಶಾಲಾ ಶುಲ್ಕ ಸಂಬಂಧ ಸರ್ಕಾರ ಏನೇ ಆದೇಶ ಮಾಡಿದರೂ ಅದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ನ್ಯಾಯಾಲಯದ ಮೆಟ್ಟಿಲು ಏರುತ್ತಿರುವುದರಿಂದ ಹೈಕೋರ್ಟ್ ಈ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಮನವಿ ಮಾಡಿದರು.