ಅರಣ್ಯದಂಚಿನ ಜನರಿಗೆ ವಿಮೆ, ಚರ್ಚಿಸಿ ಕ್ರಮ: ಸಚಿವ ಈಶ್ವರ ಖಂಡ್ರೆ

khandre
Published on

ಬೆಂಗಳೂರು: ಅರಣ್ಯದಂಚಿನ ವಸತಿ ಪ್ರದೇಶಗಳ ಜನರಿಗೆ ವಿಮಾ ಸೌಲಭ್ಯ ಕಲ್ಪಿಸುವ ಕುರಿತಂತೆ ಪರಿಶೀಲಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದಿರುವ ಮಾನವ - ಆನೆ ಸಂಘರ್ಷ ನಿರ್ವಹಣೆ ಅಂತಾರಾಷ್ಟ್ರೀಯ ಸಮಾವೇಶದ ಅಂಗವಾಗಿ ರೈತರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಡಿನಂಚಿನ ಜನರಿಗೆ ಸರ್ಕಾರದ ಸಹಯೋಗದಲ್ಲಿ ವಿಮೆ ಮಾಡಿಸಬೇಕು ಎಂಬ ಸಲಹೆಯ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಆನೆಗಳಿಗೆ ಸಂತಾನ ಹರಣಕ್ಕೆ ಕ್ರಮಕೈಗೊಂಡು ಗಜ ಸಂತತಿ ತಗ್ಗಿಸಬೇಕು, ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂಬ ಸಲಹೆಗಳಿಗೆ ಸ್ಪಂದಿಸಿದ ಸಚಿವರು ಈಗಾಗಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಿದೆ ಎಂದರು.

ಆನೆಗಳು ನಾಡಿಗೆ ಬಾರದಂತೆ ಕಾಡಿನಲ್ಲೇ ಅವುಗಳಿಗೆ ಕಬ್ಬು, ಹಲಸು ಇತ್ಯಾದಿ ಆಹಾರ ಸಿಗುವಂತೆ ಮಾಡಬೇಕು ಎಂಬ ಸಲಹೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಆನೆಗಳಿಗೆ ಸ್ವಾದಿಷ್ಟ ಆಹಾರವನ್ನು ಕಾಡಿನಲ್ಲಿ ಬೆಳೆಸಿ ನೀಡುವುದು ಸೂಕ್ತವಲ್ಲ ಎಂಬ ತಜ್ಞರ ಅಭಿಪ್ರಾಯವಿದೆ. ಈ ಬಗ್ಗೆ ಪರಾಮರ್ಶಿಸಲಾಗುವುದು. ಜೀವನ- ಜೀವನೋಪಾಯ ಎರಡೂ ಇರಬೇಕು ಎಂದ ಸಚಿವರು, ನಮ್ಮ ಪೂರ್ವಿಕರು ನೈಸರ್ಗಿಕ ಸಂಪತ್ತನ್ನು ಹಿತಮಿತವಾಗಿ ಬಳಸುತ್ತಿದ್ದರು. ಆದರೆ ಈಗ ನೈಸರ್ಗಿಕ ಸಂಪನ್ಮೂಲದ ಅತಿಯಾದ ಬಳಕೆಯೂ ಅರಣ್ಯ ನಾಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾವು- ಕ್ರಮ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮ ವಿದ್ಯುತ್ ಸ್ಪರ್ಶದಿಂದ 26 ಆನೆಗಳು ಸಾವಿಗೀಡಾಗಿವೆ ಎಂಬ ಸಭಿಕರು ನೀಡಿದ ಮಾಹಿತಿ ಆಘಾತಕಾರಿ. ಈ ನಿಟ್ಟಿನಲ್ಲಿ ಅಕ್ರಮವಾಗಿ ವನ್ಯ ಜೀವಿ ಸಾವಿಗೆ ಕಾರಣವಾಗುವಂತೆ ಬೇಲಿಗೆ ವಿದ್ಯುತ್ ಹರಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ವ್ಯಕ್ತವಾದ ಎಲ್ಲ ಸಲಹೆಗಳ ಬಗ್ಗೆ ಚರ್ಚಿಸಿ ಸೂಕ್ತವಾದ ಸಲಹೆಗಳನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net