ಅಂಬೇಡ್ಕರ್‌ಗೆ ಅಪಮಾನ; ಅಮಿತ್ ಶಾ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ|Insult to Ambedkar; District level protest against Amit Shah

B K Hariprasad
Published on

ಬೆಂಗಳೂರು: ಬಿಜೆಪಿ, ಸಂಘ ಪರಿವಾರದವರು ವ್ಯಸನಿಗಳು, ವಿಕೃತರು(Insult to Ambedkar; District level protest against Amit Shah). ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿತನಕ ಇವರು ಅಪಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಆರೋಪಿಸಿದ ರೀತಿಯಲ್ಲಿ ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್ ಆಗಿದ್ದರೆ 10 ಸಾವಿರ ಕಿಲೋ ಮೀಟರ್ ನಡೆಯಲು ಆಗುತ್ತಿರಲಿಲ್ಲ ಎಂದು ಹೇಳಿದರು.

ಬಿಜೆಪಿಯನ್ನು ಬೇರೆ ಅರ್ಥದ ಪಾರ್ಟಿ ಮಾಡಲು ಹೊರಟಿದ್ದಾರೆ. ಈಗ ಅಂಬೇಡ್ಕರ್ ಬಗ್ಗೆಯೂ ಅಪಪ್ರಚಾರ ಶುರು ಮಾಡಿದ್ದಾರೆ. ಅಮಿತ್ ಶಾ ಉದ್ದೇಶಪೂರ್ವಕವಾಗಿ ಲೆಕ್ಕಾಚಾರ ಹಾಕಿಕೊಂಡೇ ಹೇಳಿದ ಮಾತನಾಡಿದ್ದಾರೆ ಎಂದು ದೂರಿದರು.

ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ದಲಿತರು, ಕೆಳವರ್ಗದವರು, ಶೂದ್ರರು ಯಾರೂ ಬೇಕಾಗಿಲ್ಲ. ಇವರದ್ದು ಮೇಲ್ವರ್ಗದ ಜಾತಿ ಮಾತ್ರ ಇರಬೇಕು ಎಂಬ ಉದ್ದೇಶ. ಅವರಿಗೆ ಕೆಳವರ್ಗದ ಉದ್ಧಾರ ಮಾಡುವುದು ಬೇಕಾಗಿಯೂ ಇಲ್ಲ. ಸುಮ್ಮನೆ ಅಮಿತ್ ಶಾ ಅಂಬೇಡ್ಕರ್ ಅವಹೇಳನ ಮಾಡಿದ್ದಾರೆ ಎಂದುಕೊಳ್ಳಬೇಡಿ. ಅದರ ಹಿಂದೆ ದೊಡ್ಡ ಕುತಂತ್ರವಿದೆ ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಜನರ ಕ್ಷಮೆ ಕೇಳಬೇಕು. ಜಾತಿ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ನಂಬಿಕೆ ಇಟ್ಟಿದೆ ಎಂದು ಹರಿಹಾಯ್ದರು.

ಸೋಮವಾರದಿಂದ ಅಮಿತ್ ಶಾ ಹೇಳಿಕೆ ಖಂಡಿಸಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಲೋಕಸಭೆ, ರಾಜ್ಯಸಭೆ ಸಭಾಪತಿಗಳಿಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಪತ್ರ ಬರೆದು ಸಂವಿಧಾನದ ಚರ್ಚೆಗೆ ಮನವಿ ಮಾಡಿದ್ದರು. ಹಾಗಾಗಿ ಚರ್ಚೆ ಕೈಗೆತ್ತಿಕೊಳ್ಳಲಾಗಿತ್ತು. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ಹಕ್ಕು, ದೀನ ದಲಿತರ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ಮಾಡಲು ಅವಕಾಶವಿತ್ತು. ರಕ್ಷಣೆ ಅವಕಾಶಗಳನ್ನು ಚರ್ಚೆ ಮಾಡಬಹುದಿತ್ತು. ಆದರೆ ಸಮರ್ಪಕವಾಗಿ ಚರ್ಚೆ ಮಾಡದೆ, ಅಂಬೇಡ್ಕರ್ ಅವರನ್ನು ಅಮಿತ್ ಶಾ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಅಂಬೇಡ್ಕರ್ ಎನ್ನುವ ಬದಲು ದೇವರ ಹೆಸರು ಹೇಳಿದ್ದರೆ ಸ್ವರ್ಗದಲ್ಲಿ ಜಾಗ ಸಿಗುತ್ತಿತ್ತು ಎಂದಿದ್ದಾರೆ.

ಸಾವರ್ಕರ್, ಗೋಲ್ವಾಲ್ಕರ್ ಅವರು ರಾಷ್ಟ್ರ ದ್ವಜ, ಸಂವಿಧಾನವನ್ನು ಒಪ್ಪಿರಲಿಲ್ಲ. ಆರ್‌ಎಸ್‌ಎಸ್ ಕಚೇರಿಗಳಲ್ಲಿ 52 ವರ್ಷಗಳ ಕಾಲ ರಾಷ್ಟ್ರ ದ್ವಜ ಹಾರಿಸಿರಲಿಲ್ಲ. ಇದು ಅವರ ಹಿಡನ್ ಅಜೆಂಡಾ ಎಂದು ತರಾಟೆ ತೆಗೆದುಕೊಂಡರು.

ಆರ್‌ಎಸ್‌ಎಸ್‌ಗೆ 100 ವರ್ಷ ತುಂಬುತ್ತಿದೆ. ಹಾಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಜಾತಿ ಜನಗಣತಿಗೆ ಪ್ರಧಾನಿ ಮೋದಿ ವಿರೋಧ ಮಾಡುತ್ತಿದ್ದಾರೆ. ಅಮಿತ್ ಶಾ ಅವರನ್ನು ಉಪಯೋಗಿಸಿಕೊಂಡು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಅಮಿತ್ ಶಾ ವಿರುದ್ಧ ಸೋಮವಾರದಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net