ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಸೂಚನೆ: ಸಚಿವ ಪರಮೇಶ್ವರ್ | Dharmasthala case complaints

g parameshwara
Published on

ಬೆಂಗಳೂರು: ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಅಂತಿಮ ವರದಿಯನ್ನು ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಸಂಪುಟ ಪುನರ್ ರಚನೆ ಕುರಿತು ಹೈಕಮಾಂಡ್ ತೀರ್ಮಾನ ನಾವು ಹೇಳಲು ಬರುವುದಿಲ್ಲ. ಅವರು ಏನು ತೀರ್ಮಾನ ಮಾಡುತ್ತಾರೆ ಕಾದು ನೋಡೋಣ. ದಿನನಿತ್ಯ ಮಾಧ್ಯಮದಲ್ಲಿ ಹೇಳಿಕೆ ಕೊಡಬಹುದು ಅಷ್ಟೇ. ಇಲ್ಲಿವರೆಗೆ ಹೈಕಮಾಂಡ್‌ನವರು ಏನಾದರು ಹೇಳಿದ್ದಾರೆಯೇ? ಎಂದು ಕೇಳಿದರು.

ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆ ಮಾಡುತ್ತೇವೆ ಎಂಬುದರ ಬಗ್ಗೆ ಹೈಕಮಾಂಡ್‌ನಿಂದ ಯಾವುದೇ ಮಾಹಿತಿ ಇಲ್ಲ. ಏನಾದರು ಹೈಕಮಾಂಡ್‌ನಿಂದ ಸೂಚನೆ ಬಂದಿದ್ದರೆ ನಾವು ಪ್ರತಿಕ್ರಿಯಿಸಬಹುದು. ಹೈಕಮಾಂಡ್ ತಿಳಿಸುವವರೆಗೂ ಯಾವುದಕ್ಕು ಮಹತ್ವ ಇರುವುದಿಲ್ಲ ಎಂದರು.

ಆಡಳಿತದ ಮೇಲೆ ಪರಿಣಾಮ

ಅಧಿಕಾರ ಹಂಚಿಕೆ, ಎರಡೂವರೆ ವರ್ಷ ಅಂತ ಚರ್ಚೆ ಆಯ್ತು. ಈಗ ಸಂಪುಟ ಪುನರ್ ರಚನೆ ಎನ್ನುತ್ತಿದ್ದಾರೆ. ಲೀಡರ್‌ಶಿಪ್ ಬದಲಾವಣೆ ಅಂತಾಯ್ತು. ದಿನನಿತ್ಯ ಈ ರೀತಿ ಗೊಂದಲಗಳಾಗುತ್ತಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ? ಎಂದು ಸಚಿವ ಪರಮೇಶ್ವರ್ ಪ್ರಶ್ನಿಸಿದರು.

ಆಡಳಿತ ಚೆನ್ನಾಗಿ ಆಗಬೇಕು ಅಂತಂದರೆ ಇದೆಲ್ಲ ನಿಲ್ಲಬೇಕು. ನೆರೆ ಹಾವಳಿ, ರಸ್ತೆ ಗುಂಡಿ ಬಿದ್ದಿದೆ ಈತರ ಮಾತುಗಳನ್ನು ನಿಲ್ಲಿಸಲು ಆಡಳಿತ ಚುರುಕುಗೊಳಿಸಬೇಕು. ಈ ಒಂದು ಗೊಂದಲದಲ್ಲಿ ನಾವು ಇರುವುದು ಸರಿಯಲ್ಲ ಎಂದು ಹೇಳಿದರು.

ನವೆಂಬರ್ 1ರಂದು ಮುಖ್ಯಮಂತ್ರಿಗಳು ಸಂತೋಷಕೂಟ ಏರ್ಪಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಊಟ ಹಾಕಿಸಿದರೆ, ರಾಜಕೀಯ ದೊಡ್ಡ ಬೆಳವಣಿಗೆ ಎನ್ನಬೇಕಿಲ್ಲ.

ಇದಕ್ಕೆ ರಾಜಕೀಯವಾಗಿ ವಿಶ್ಲೆಷಣೆ ಮಾಡುವುದು ಸರಿಯಲ್ಲ. ಸಂಪುಟ ಪುನರ್ ರಚನೆ ಮಾಡುವ ಕುರಿತು ಹೈಕಮಾಂಡ್‌ನವರು ಈವರೆಗೆ ಯಾರು ಹೇಳಿಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ ಎಂದು ಹೇಳಿದರು.

ದಲಿತ ಸಿಎಂ ಕೂಗು

ಸಚಿವ ಮುನಿಯಪ್ಪ ಅವರು ಸಿಎಂ ಆಗಲಿ ಎಂದು ಶಿವಮೊಗ್ಗದಲ್ಲಿ ಘೋಷಣೆ ಕೂಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕೆ.ಹೆಚ್.ಮುನಿಯಪ್ಪ ಅವರು ಏಳು ಬಾರಿ ಎಂಸಂಸದರಾಗಿದ್ದವರು.‌ ಇದು ಸಾಮಾನ್ಯವಲ್ಲ. ಪಕ್ಷದಲ್ಲಿ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದರು. ಈಗ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಅವರು ಸಮರ್ಥರಿದ್ದು, ಅರ್ಹತೆಯೂ ಇದೆ. ಮುನಿಯಪ್ಪನವರು ಸಿಎಂ ಆದರೆ ನಾನು ಸಂತೋಷ ಪಡುವವನೆ.

ನಾವೆಲ್ಲ ಒಂದು ವರ್ಗಕ್ಕೆ ಸೇರಿದ್ದೇವೆ. ಆ ವರ್ಗಕ್ಕೆ ಅವಕಾಶ ಸಿಕ್ಕಿತಲ್ಲ ಎಂಬುದು ಸಂತೋಷ ಆಗುತ್ತದೆ. ಯಾವ ವರ್ಗ ತುಳಿತಕ್ಕೆ ಒಳಗಾಗಿತ್ತು, ಆ ವರ್ಗಕ್ಕೆ ಆಡಳಿತ ವರ್ಗ ಆಗುತ್ತದೆ ಅಂದರೆ ಸಂತೋಷ‌ಪಡಲು ಆಗುವುದಿಲ್ಲವೇ ಎಂದರು.

ದಲಿತ ಸಿಎಂ ಸ್ಥಾನ ಈ ಸಲ ಸಿಗಬೇಕು ಎಂಬ ವಿಶ್ವಾಸ ಏನಾದರು ಇದೆಯೆ ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ತೀರ್ಮಾನ ಮಾಡುವವರು ಯಾರು? ನಾವು ಇಲ್ಲಿ ಕುಳಿತುಕೊಂಡು ನಾಲ್ಕು ಜನ ಹೇಳಿದರೆ ಆಗುವುದಿಲ್ಲ. ಹೈಕಮಾಂಡ್‌ನವರು ವಿಶ್ಲೇಷಣೆ ಮಾಡುತ್ತಾರೆ. ಬಿಹಾರದಲ್ಲಿ ಎಲೆಕ್ಷನ್ ನಡೆಯುತ್ತಿದೆ. ತದನಂತರ ಇದಕ್ಕೆ ಅವಶ್ಯಕತೆ ಇದ್ದರೆ ಅವರೇ ಮಾಡುತ್ತಾರೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net