ವಾಹನಗಳು ಸುರಕ್ಷತಾ ಕ್ರಮ ಪಾಲಿಸಲು ಸೂಚನೆ

klr school bus,webp
ಕೋಲಾರ ಜಿಲ್ಲಾ ಪೊಲೀಸ್​ ಅಧಿಕಾರಿಗಳು ಗುರುವಾರ ವಿವಿಧೆಡೆ ಶಾಲಾ ವಾಹನಗಳ ತಪಾಸಣೆ ನಡೆಸಿದರು.
Published on

ಕೋಲಾರ: ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಾಹನಗಳು ಸುರಕ್ಷತೆ ಕ್ರಮವಹಿಸಲು ಜಿಲ್ಲಾ ಪೊಲೀಸ್​ ಇಲಾಖೆಯು ಕಾರ್ಯಾಚಣೆ ನಡೆಸಿ ಎಚ್ಚರಿಕೆ ನೀಡುತ್ತಿದೆ.

ಜಿಲ್ಲೆಯ ಪೊಲೀಸ್​ ಉಪ ನಿರೀಕ್ಷಕರು, ಪೊಲೀಸ್​ ನಿರೀಕ್ಷಕರು, ಪೊಲೀಸ್​ ಉಪಾಧೀಕ್ಷಕರು ಹಾಗೂ ಅಪರ ಪೊಲೀಸ್​ ಅಧೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.
ಶಾಲೆ ಇರುವ ಪ್ರದೇಶಗಳಲ್ಲಿ ಶಾಲಾ ವಲಯ, ವೇಗದ ಮಿತಿ ಇತ್ಯಾದಿ ಚಿಹ್ನೆ ಇರುವ ಫಲಕಗಳನ್ನು ಪ್ರದರ್ಶಿಸಬೇಕು. ಹಾಗೂ ಶಾಲಾ ವಾಹನಗಳು 40 ಕಿಮೀ ವೇಗ ಮೀರದಂತೆ ಸ್ಪೀಡ್​ ಬ್ರೇಕರ್​ ಅಳವಡಿಸಲು ಪೊಲೀಸ್​ ಅಧಿಕಾರಿಗಳು ಸೂಚಿಸಿದ್ದಾರೆ.
ಡಿವೈಎಸ್ಪಿ ಎಚ್​.ಎಂ.ನಾಗ್ತೆ ಮಾತನಾಡಿ, ಶಾಲಾ ವಾಹನಗಳಿಗೆ ನೋಂದಣಿ ಪ್ರಮಾಣ ಪತ್ರ ಹಾಗೂ ಫಿಟ್​ನೆಸ್​ ಸರ್ಟಿಫಿಕೇಟ್​ ಹೊಂದಿರಬೇಕು. ವಾಹನ ನೋಂದಣಿಯಾದ ದಿನಾಂಕದಿಂದ 15 ವರ್ಷದ ಅವಧಿ ಮೀರದೆ ಇರುವ ವಾಹನಗಳನ್ನು ಮಾತ್ರ ಉಪಯೋಗಿಸಬೇಕು. ಆಗಿಂದಾಗ್ಗೆ ವಾಹನದ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದ್ದಾರೆ.
ಮಕ್ಕಳಿಗೆ ಅನುಗುಣವಾಗಿ ವಾಹನ ಸಾಮರ್ಥ್ಯ ಇರಬೇಕು. ವಾಹನದ ಒಳಗೆ ಮಕ್ಕಳು ನಿಲ್ಲಬಾರದು. ಎಲ್ಲ ಮಕ್ಕಳಿಗೆ ಆಸನದ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಚಾಲಕರನ್ನು ನೇಮಕ ಮಾಡುವ ಮುನ್ನ ಪೊಲೀಸ್​ ಇಲಾಖೆಯಿಂದ ಅವರ ಗುಣ ಮತ್ತು ನಡತೆಯ ಪ್ರಮಾಣ ಪತ್ರ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಹಾಗೂ ಚಾಲಕರಿಗೆ ವಾಹನ ಚಾಲನಾ ಪರವಾನಗಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ವಾಹನದ ಗಾಜಿನ ಮೇಲೆ ಯಾವುದೇ ಟೆಂಡೆಂಟ್​ ಅಥವಾ ಕಲರ್​ಗಗಳನ್ನು ಅಳವಡಿಸಬಾರದು. ಗಾಜುಗಳು ಪಾರದರ್ಶಕವಾಗಿರಬೇಕು. ಶಾಲಾ ವಾಹನಗಳಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್​ಗಳನ್ನಿಡಲು ಸಾಕಷ್ಟು ಸ್ಥಳ ಮೀಸಲಿಡಬೇಕು. ಶಾಲಾ ವಾನಹಗಳಲ್ಲಿ ಸಿಸಿ ಕ್ಯಾಮರಾ ಮತ್ತು ಜಿಪಿಎಸ್​ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ಚಾಲಕನ ನಡತೆಯ ಬಗ್ಗೆ ತಿಳಿಯಬಹುದಾಗಿರುತ್ತದೆ, ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಎಚ್ಚರಿಕೆ ನೀಡಿದರು.
ಆಟೋಗಳಲ್ಲಿ ಮಕ್ಕಳನ್ನು ಕಳುಹಿಸುವ ಪಾಲಕರನ್ನು ಶಾಲೆಗಳಿಗೆ ಕರೆಯಿಸಿ ಅವರಿಗೆ ತಿಳುವಳಿಕೆ ನೀಡಿ 5 ಕ್ಕಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ತುಂಬುವ ವಾಹನಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದಂತೆ ತಿಳಿ ಹೇಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net