ಕೋಲಾರ: ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ನಗರದ ಎರಡು ವೃತ್ತಗಳಿಗೆ ಸಂಚಾರಿ ದೀಪಗಳನ್ನು ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪೊಲೀಸ್ ಇಲಾಖೆ ಮುಂದಾಗಿದೆ.
ನಗರದ ಟೇಕಲ್ ವೃತ್ತ ಹಾಗೂ ಅಮ್ಮವಾರಿಪೇಟೆ ವೃತ್ತಗಳಲ್ಲಿ ಸಂಚಾರಿ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಒಂದೆರೆಡು ದಿನಗಳಲ್ಲಿ ಸಂಚಾರಿ ದೀಪಗಳು ಕಾರ್ಯಾರಂಭ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಕಳೆದ ಕೆಲ ವರ್ಷಗಳಿಂದ ಅಮ್ಮವಾರಿಪೇಟೆ ವೃತ್ತದಲ್ಲಿ ಸಂಚಾರಿ ನಿಯಂತ್ರಣ ಕುರಿತು ಗಮನಹರಿಸಿದ್ದ ಪೇದೆ ಬಿ.ಷರೀಫ್ ಅವರು ಈ ವೃತ್ತಗಳಲ್ಲಿ ವಾಹನ ದಟ್ಟಣೆ ಕುರಿತು ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಅಮ್ಮವಾರಿಪೇಟೆ ವೃತ್ತ ಹಾಗೂ ಟೇಕಲ್ ವೃತ್ತಗಳ ವಾಹನ ದಟ್ಟಣೆ ಕುರಿತು ಸರ್ವೇ ನಡೆಸಿ, ಡ್ರೋಣ್ ಮೂಲಕ ವಾಹನಗಳ ದಟ್ಟಣೆ ಅವಲೋಕಿಸಿತ್ತು. ಪ್ರತಿ ನಿತ್ಯ ಜನರು ಕೆಲಸಗಳಿಗೆ, ವಿದ್ಯಾರ್ಥಿಗಳು ಶಾಲಾ&ಕಾಲೇಜಿಗೆ ತೆರಳುವ ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆ ಅವಧಿಯಲ್ಲಿ ವಿಪರೀತ ವಾಹನ ಸಂಚಾರ ಇರುವುದು ದೃಢಪಟ್ಟಿದ್ದರಿಂದ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು ಮೂಲಕ ಸಂಸ್ಥೆಯೊಂದು ಸಂಚಾರಿ ದೀಪಗಳ ಅಳವಡಿಕೆ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಆರಂಭಿಸಲಾಗಿದೆ. ಕೆಲವೆ ದಿನಗಳಲ್ಲಿ ಸಂಚಾರಿ ದೀಪಗಳ ಮಾರ್ಗಸೂಚನೆ ಅಡಿ ವಾಹನ ಸವಾರರು ಸಂಚರಿಸಬೇಕಾಗುತ್ತದೆ ಎಂದು ಸಂಚಾರಿ ಪೇದೆ ಬಿ.ಷರೀಫ್ ಮಾಹಿತಿ ನೀಡಿದರು.
ಸಂಚಾರಿ ದೀಪಗಳ ಅಳವಡಿಕೆಯ ಕಾರಣ, ವಾಹನಗಳ ನಿಲುಗಡೆಗೆ ಜಾಗ ಮಾಡಿಕೊಡುವ ಸಲುವಾಗಿ ಬೊಂಬು ಬಜಾರ್ ಮತ್ತು ಅಮ್ಮವಾರಿಪೇಟೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಸಂಚಾರಿ ದೀಪಗಳ ಅಳವಡಿಕೆ ನಂತರ ಬಂಗಾರಪೇಟೆ ವೃತ್ತ ಹಾಗೂ ಶ್ರೀನಿವಾಸಪುರ ಟೋಲ್ಗೇಟ್ ವೃತ್ತಗಳಲ್ಲಿ ಸಂಚಾರಿ ದೀಪಗಳ ಅಳವಡಿಕೆಗೂ ಪೊಲೀಸ್ ಇಲಾಖೆ ಕ್ರಮವಹಿಸಿದೆ ಎಂದು ತಿಳಿಸಿದರು.