ಎತ್ತಿನಹೊಳೆ ಕೆರೆ ಭರ್ತಿ ಯೋಜನೆಯಾಗಿ ಪರಿವರ್ತಿಸಲು ಸೂಚನೆ

Delhi special special representative Jayachandra meeting
Published on

ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ಶಿರಾ ತಾಲೂಕಿಗೆ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ಯೋಜನೆಯನ್ನು ಮಾರ್ಪಡಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿ ಪರಿವರ್ತಿಸಿ ರೂಪಿಸಲು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅಧ್ಯಕ್ಷತೆ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಗಿದೆ.

ವಿಧಾನಸೌಧದ ದೆಹಲಿ ವಿಶೇಷ ಪ್ರತಿನಿಧಿ ಕೊಠಡಿಯಲ್ಲಿ ಶಿರಾ ಕ್ಷೇತ್ರದ ಶಾಸಕರೂ ಆದ ಜಯಚಂದ್ರ ಸಮಕ್ಷಮ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳ ಸಭೆ ನಡೆಯಿತು. ಮಹತ್ವದ ಈ ಯೋಜನೆಯಡಿ ಇದುವರೆಗೂ ಸಾಧಿಸಿದ ಪ್ರಗತಿ ಬಗ್ಗೆ ಪರಾಮರ್ಶಿಸಿತು.

ಎತ್ತಿನಹೊಳೆ ಯೋಜನೆಯಡಿ ಶಿರಾ ತಾಲೂಕಿನ 200 ಕೆರೆಗಳಿಗೆ ಕುಡಿಯುವ ನೀರಿಗಾಗಿ 0.564 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಇದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಹಾಗಾಗಿ ಈ ಯೋಜನೆಯನ್ನು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿ ಮಾರ್ಪಡಿಸಲು ತಿಳಿಸಿದರು.

ಈ ಸಲಹೆಗೆ ನಿಗಮದ ಅಧಿಕಾರಿಗಳು ಸಮ್ಮತಿಸಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಸಮನ್ವಯ ಸಮಿತಿ ಮುಂದೆ ಮಂಡಿಸಲಾಗುವುದು. ಜಲಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಿದೆ ಎಂಬ ಮಾಹಿತಿ ನೀಡಿದರು.

ಮುಂದಿನ ಒಂದು ತಿಂಗಳಲ್ಲಿ ಸಮಿತಿ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು. ಇದಕ್ಕೂ ಮುನ್ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳ ಜತೆಗೂ ಸಭೆ ನಡೆಸಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಎತ್ತಿನಹೊಳೆ ಸಮಗ್ರ ಯೋಜನೆಯ ಕಾರ್ಯಪ್ರಗತಿ ಮಾಹಿತಿ ಪಡೆದ ಟಿ.ಬಿ.ಜಯಚಂದ್ರ, ಈ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಮುಖ್ಯ ಇಂಜಿನಿಯರ್ ವರದಯ್ಯ, ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಜಯಪ್ರಕಾಶ್ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net