ಜಾತಿ ಪ್ರಮಾಣಪತ್ರದ ಗೊಂದಲ ನಿವಾರಣೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ ಮಾಹಿತಿ

IMG-20241015-WA0026
Published on

ಬೆಂಗಳೂರು: ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆಯಾಗಬಾರದೆಂದು ಕೋರುತ್ತಾ, ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ಬಗ್ಗೆಯೂ ಸಭೆಯ ಗಮನವನ್ನು ಸೆಳೆದಿರುವುದಾಗಿ ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89.63 ಕೋಟಿ ರೂ.ಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂ.ಗಳನ್ನು ವಾಪಸ್ಸು ಪಡೆಯಲಾಗಿದೆ. ಉಳಿದ 84.63 ಕೋಟಿ ರೂ.ಗಳಲ್ಲಿ 71.54 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿದೆ. ಇನ್ನುಳಿದ ಸುಮಾರು 13 ಕೋಟಿಗಳ ಮೊತ್ತವನ್ನು ವಸೂಲು ಮಾಡಿಕೊಡುವುದಾಗಿ ಎಸ್ ಐ ಟಿ ತಿಳಿಸಿದೆ.

ಈ ರೀತಿ ಒಟ್ಟು ಅವ್ಯವಹಾರವಾಗಿದ್ದ ಪೂರ್ಣ ಮೊತ್ತವನ್ನೂ ಸಹ ಮರುಪಡೆಯಲಾಗುತ್ತಿದೆ. ಈ ಮಧ್ಯೆ, ಪ್ರಕರಣ ನ್ಯಾಯಾಲಯದಲ್ಲಿ, ಮುಂಬರುವ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net