

ವಿಜಯವಾಣಿ ಸುದ್ದಿಜಾಲ ತಲಕಾಡು
ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಪ್ರಗತಿ ಕಾಮಗಾರಿ ವೀಕ್ಷಿಸಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ತಲಕಾಡು ಸಮೀಪದ ಟಿ.ದೊಡ್ಡಪುರ ಗ್ರಾಮಕ್ಕೆ ಭೇಟಿ ನೀಡಿದ್ದರು.
ನರೇಗಾ ಯೋಜನೆಯಡಿ 3 ಲಕ್ಷ ರೂ. ವೆಚ್ಚದ ಟಿ.ದೊಡ್ಡಪುರ ಕೆರೆ ಅಭಿವೃದ್ಧಿ ಸೇರಿೆ 5 ಲಕ್ಷ ರೂ. ವೆಚ್ಚದ ದೊಡ್ಡನಹುಂಡಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಚಿವರು, ಕಾಮಗಾರಿ ಕುರಿತು ತೃಪ್ತಿ ವ್ಯಕ್ತಪಡಿಸಿದರು. ಟಿ.ದೊಡ್ಡಪುರ ಗ್ರಾಮದ ಕೆರೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ 10 ಲಕ್ಷ ರೂ. ಅನುದಾನ ಒದಗಿಸಿಕೊಡಲು ಸ್ಥಳದಲ್ಲಿದ್ದ ಜಿ.ಪಂ ಸಿಇಒ ಪ್ರಶಾಂತ್‌ಮಿಶ್ರ ಅವರಿಗೆ ಸೂಚನೆ ನೀಡಿದರು.
ನರೇಗಾ ಯೋಜನೆಯಡಿ ಪುರುಷ ಹಾಗೂ ಮಹಿಳಾ ಕೂಲಿ ಕಾರ್ಮಿಕರಿಗೆ ಸರ್ಕಾರ 275ರೂ. ಸಮಾನ ಕೂಲಿ ನೀಡುತ್ತದೆ. ಕರೊನಾದಿಂದ ಕೆಲಸ ಇಲ್ಲದೆ ಮನೆಯಲ್ಲಿ ಯಾರೂ ಕೂರುವ ಅವಶ್ಯಕತೆ ಇಲ್ಲ. ಕೂಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಎಷ್ಟು ಜನರಿದ್ದರೂ ಅವರಿಗೆ ಉದ್ಯೋಗ ನೀಡಲಾಗುತ್ತದೆ. ಜಾಬ್ ಕಾರ್ಡ್ ನೋಂದಣಿ ಮಾಡಿಸದವರು ಕೂಡಲೇ ಸಮೀಪದ ಗ್ರಾಮ ಪಂಚಾಯಿತಿಗೆ ತೆರಳಿ ಜಾಬ್ ಕಾರ್ಡ್ ಮಾಡಿಸಿಕೊಂಡು ಕೆಲಸಕ್ಕೆ ಹಾಜರಾಗುವಂತೆ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವರೇ ಖುದ್ದು ಇಲ್ಲಿಗೆ ಆಗಮಿಸಿದ್ದು, ಗ್ರಾಮದ ಕುಂದುಕೊರತೆ ಅಹವಾಲುಗಳನ್ನು ನೇರವಾಗಿ ಸಚಿವರ ಗಮನಕ್ಕೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜನರಿಗೆ ಸಲಹೆ ನೀಡಿದರು.
ಟಿ.ದೊಡ್ಡಪುರ, ಶಂಭುದೇವನಪುರ ಗ್ರಾಮಸ್ಥರು ಈಶ್ವರಪ್ಪರನ್ನು ಸ್ವಾಗತಿಸಿದರು. ಟಿ.ದೊಡ್ಡಪುರ ಗ್ರಾಮಸ್ಥರು ಈಶ್ವರಪ್ಪ ಅವರನ್ನು ಸನ್ಮಾನಿಸಿ ಊರಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನಕ್ಕೆ ಬೇಡಿಕೆ ಇಟ್ಟರು.
ಮೈಸೂರು ಕೊಡಗು ಸಂಸದ, ಶಾಸಕ ಎಂ.ಆಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸಿ, ಡಾ.ಎಂ.ವಿ.ವೆಂಕಟರಾಜು, ಇಒ, ಜೆರಾಲ್ಡ್ ರಾಜೇಶ್, ತಹಸೀಲ್ದಾರ್ ನಾಗೇಶ್ ಇತರರಿದ್ದರು.