

Pond : ನೀವು ಯಾವುದಾದರೂ ಕೆರೆಯನ್ನು ಶೋಧಿಸಿದಾಗ ನಿಮಗೆ ಏನು ಸಿಗಬಹುದು? ಈ ಪ್ರಶ್ನೆಗೆ ಬಹುತೇಕರ ಉತ್ತರ ಮೀನು ಮತ್ತು ಹಾವುಗಳು ಎನ್ನುತ್ತಾರೆ. ಆದರೆ, ಛತ್ತೀಸ್‌ಗಢದ ಬಿಲಾಸ್‌ಪುರದ ಕೊಳವೊಂದರಲ್ಲಿ ಬರೀ ಮದ್ಯದ ಡಬ್ಬಿಗಳು ಸಿಕ್ಕಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಬಾಟಲಿಗಳು ಕೊಳದಲ್ಲಿ ಇರುವುದನ್ನು ನೋಡಿ ಸ್ಥಳೀಯರೆಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾದರು. ಅಷ್ಟಕ್ಕೂ ಈ ಮದ್ಯದ ಡಬ್ಬಿಗಳು ಕೊಳಕ್ಕೆ ಹೇಗೆ ಬಂದವು ಗೊತ್ತಾ? ಇಲ್ಲಿದೆ ಉತ್ತರ.
ಬಿಲಾಸ್ಪುರದಲ್ಲಿ ಪುರಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಚುನಾವಣಾ ಪ್ರಕ್ರಿಯೆಯು ಪ್ರಸ್ತುತ ನಾಮಪತ್ರ ಸಲ್ಲಿಕೆ ಹಂತದಲ್ಲಿದೆ. ಹೀಗಾಗಿ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಪುರುಷ ಮತದಾರರನ್ನು ಸೆಳೆಯಲು ಮದ್ಯ ವಿತರಿಸುತ್ತಿದ್ದಾರೆ. ಮದ್ಯ ಬಾಟಲಿಗಳು ಅಧಿಕಾರಿಗಳ ಕಣ್ಣಿಗೆ ಬಿದ್ದು ಅವುಗಳನ್ನು ವಶಪಡಿಸಿಕೊಳ್ಳದಿರಲೆಂದು ರಾಜಕಾರಣಿಗಳು ನಾನಾ ತಂತ್ರಗಳನ್ನು ಎಣೆಯುತ್ತಿದ್ದಾರೆ.
ಇತ್ತೀಚೆಗೆ, ಅಬಕಾರಿ ಇಲಾಖೆ ತಂಡವು ಗನಿಯಾರಿ ಪ್ರದೇಶದಲ್ಲಿ ಭಾರಿ ತಪಾಸಣೆ ನಡೆಸಿತು. ಆ ಪ್ರದೇಶದ ಕೊಳವೊಂದರಲ್ಲಿ ಅಪಾರ ಪ್ರಮಾಣದ ಮದ್ಯವನ್ನು ಬಚ್ಚಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಬಳಿಕ ಅಧಿಕಾರಿಗಳು ದಾಳಿ ನಡೆಸಿದರು. ಡೈವರ್‌ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿದಾಗ ಮದ್ಯದ ಬಾಟಲಿಗಳು ಕಂಡುಬಂದಿವೆ.
8,700 ಕೆಜಿ ಮಹುವಾ ಲಹನ್ (ಮದ್ಯ ತಯಾರಿಸಲು ಬಳಸುವ ಕಚ್ಚಾ ವಸ್ತು) ಮತ್ತು 307 ಲೀಟರ್ ಮದ್ಯ ಪತ್ತೆಯಾಗಿದೆ. ಈ ಮದ್ಯವನ್ನು ಚುನಾವಣೆಯ ಸಮಯದಲ್ಲಿ ಸೇವನೆಗಾಗಿ ಇಡಲಾಗಿತ್ತು, ಆದರೆ ಅದನ್ನು ಸರಬರಾಜು ಮಾಡುವ ಮೊದಲೇ ವಶಪಡಿಸಿಕೊಳ್ಳಲಾಗಿದೆ.
ಚುನಾವಣೆಯ ಸಮಯದಲ್ಲಿ ಮದ್ಯ ಕಳ್ಳಸಾಗಣೆದಾರರು ಹೆಚ್ಚಾಗಿ ಕಂಡುಬರುತ್ತಾರೆ. ಮತದಾರರನ್ನು ಆಕರ್ಷಿಸಲು ಅಕ್ರಮ ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದಾಗ್ಯೂ, ಈ ಬಾರಿ ಅಂತಹ ಪ್ರಕರಣಗಳನ್ನು ತಡೆಗಟ್ಟಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ತಪಾಸಣೆಗಳು ಮುಂದುವರಿಯಲಿವೆ ಎಂದು ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಕಲ್ಪನಾ ರಾಥೋಡ್ ಹೇಳಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಯಾವುದೇ ಸಂದರ್ಭದಲ್ಲೂ ಚುನಾವಣೆಗೆ ಮದ್ಯವನ್ನು ಬಳಸಬಾರದು ಎಂದು ಕಲ್ಪನಾ ರಾಥೋಡ್ ತಿಳಿಸಿದರು. (ಏಜೆನ್ಸೀಸ್)