

ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿಜಯ ಗಣಪತಿ ಮತ್ತು ವಾಸುಕಿ ನಾಗದೇವತೆ ಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮ ನ.2 ಮತ್ತು 3ರಂದು ನಡೆಯಲಿದೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖ ಮೋಹನ್ ಜಾಧವ್ ಹೇಳಿದರು.
2024ರಲ್ಲಿ ಜು.5ರಂದು ಬಂಗಾರಪ್ಪ ಬಡಾವಣೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮನೆ ಎದುರಿಗಿದ್ದ ಗಣಪತಿ ಮತ್ತು ನಾಗದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು ಭಗ್ನಗೊಳಿಸಿದ್ದ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂದು ದೇವತೆಗಳಿಗೆ ಅಪಮಾನ ಮಾಡಿದ್ದ. ಅದನ್ನು ರಾಷ್ಟ್ರಭಕ್ತರ ಬಳಗ ಖಂಡಿಸಿತ್ತು. ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಕೂಡ ಮಾಡಲಾಗಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದೇ ಜಾಗದಲ್ಲಿ ಈಶ್ವರಪ್ಪ ಅವರು ಗಣಪತಿ ಮತ್ತು ಶ್ರೀ ನಾಗರ ದೇವರ ದೇವಾಲಯ ನಿರ್ಮಿಸಿ ಮರುಪ್ರತಿಷ್ಠಾಪಿಸಬೇಕು ಎಂದು ಸಂಕಲ್ಪ ಮಾಡಿದ್ದರು. ಹಿಂದು ದೇವತೆಗಳಿಗಾದ ಅವಮಾನ ಕಂಡು ನೊಂದಿದ್ದರು. ಇದೀಗ ಅಲ್ಲಿ ವಿಜಯ ಗಣಪತಿ ಮತ್ತು ವಾಸುಕಿ ನಾಗದೇವತೆ ಮಂದಿರ ನಿರ್ಮಾಣಗೊಂಡಿದೆ. ಈ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಕೆ.ಎಸ್.ಈಶ್ವರಪ್ಪ ಅವರು ಹೊತ್ತಿದ್ದರು. ಅದರಂತೆ ಈಗ ಆ ಭಾಗದ ಹಿಂದು ಯುವಕರ ಸಹಕಾರದಲ್ಲಿ ಸಮಿತಿ ರಚಿಸಿ ದೇವಸ್ಥಾನ ನಿರ್ಮಿಸಲಾಗಿದೆ ಎಂದರು.
ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಶಂಕರ ಭಾರತಿ ಸ್ವಾಮೀಜಿ ವಹಿಸುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಉಪಸ್ಥಿತರಿರುವರು ಎಂದರು.
ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಇ.ವಿಶ್ವಾಸ್, ಕುಮಾರ್, ಗೋವಿಂದಪ್ಪ, ಟಾಕ್ರಾನಾಯ್ಕಾ, ನಾಗರಾಜ್, ಪ್ರಕಾಶ್, ಪ್ರಶಾಂತ್, ರಾಗಿಗುಡ್ಡ ನಿವಾಸಿಗಳಾದ ಚಂದ್ರು, ಮಲ್ಲೇಶ್, ಜಯರಾಮ್ ಸುದ್ದಿಗೋಷ್ಠಿಯಲ್ಲಿದ್ದರು.