ನೂತನ ಚರಬಿಂಬ ಪ್ರತಿಷ್ಠಾಪನೆ

Dharmika
ಬೀರೂರಿನ ಸೀತಾರಾಮ ಲಕ್ಷ್ಮಣ ಆಂಜನೇಯ ಸ್ವಾಮಿಯ ನೂತನ ಚರಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರೀ ಬೀರದೇವರ ದೇವಸ್ಥಾನದ ಎದುರು ನೆರವೇರಿತು.
Published on

ಬೀರೂರು: ಪಟ್ಟಣದ ಶ್ರೀರಾಮ ದೇವಸ್ಥಾನದಲ್ಲಿ ಶನಿವಾರದಿಂದ ಶ್ರೀ ಸೀತಾರಾಮ ಲಕ್ಷ್ಮಣ ಆಂಜನೇಯ ಸ್ವಾಮಿಯ ನೂತನ ಚರಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಆರಂಭವಾಯಿತು.

ಶ್ರೀ ಗಂಗಾದೇವತಾ ಪೂಜೆಗಳೊಂದಿಗೆ ಶ್ರೀ ಸ್ವಾಮಿಯ ನೂತನ ಚರಬಿಂಬವನ್ನು ರಾಜಬೀದಿಗಳಲ್ಲಿ ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಶ್ರೀ ಬೀರಲಿಂಗೇಶ್ವರ, ಕರಗಲ್ ಬೀದಿಯಲ್ಲಿ ನೆಲೆಸಿರುವ ಬೇಟೆ ರಂಗನಾಥಸ್ವಾಮಿ ಮತ್ತು ಅಂತರಘಟ್ಟಮ್ಮ, ಮಾರ್ಗದ ಕ್ಯಾಂಪ್‌ನ ಚೊಕ್ಕಾಪುರದ ಚೌಡೇಶ್ವರಿ ಹಾಗೂ ಲಕ್ಷ್ಮೀ ದೇವರ ಜತೆಗೂಡಿ ದೇವಾಲಯಕ್ಕೆ ಆಗಮಿಸಿ ಶ್ರೀ ಗಣಪತಿ, ಶ್ರೀ ವಾಸ್ತು ಪೂಜೆಯನ್ನು ನೆರವೇರಿಸಿದ ನಂತರ ಪುಣ್ಯಾಹ, ದೇವನಾಂದಿ, ರಕ್ಷಾಬಂಧನ, ಋತ್ವಿಗ್ವರಣ, ರಾಕ್ಷೋಘ್ನ ಪೂಜೆ, ಪ್ರಧಾನ ಕಳಸ ಪೂಜಾ ವಿಗ್ರಹ ಸಂಸ್ಕಾರ ಮತ್ತು ಪೀಠ ಸಂಸ್ಕಾರ ನೆರವೇರಿಸಿದರು.
ಭಾನುವಾರ ಬೆಳಗ್ಗೆ ಶ್ರೀ ಸ್ವಾಮಿಯ ನೂತನ ಪೀಠದಲ್ಲಿ ಯಂತ್ರಸ್ಥಾಪನೆ ನೆರವೇರಿಸಲಾಯಿತು. ಹುಣಸಘಟ್ಟ ಶ್ರೀ ಗುರು ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ಸ್ವಾಮಿಗೆ ಅಭಿಷೇಕ, ಪರಿವಾರ ದೇವತಾ ಹೋಮ, ಶ್ರೀ ರಾಮತಾರಕ ಹೋಮ, ಜಯಾದಿ ಪ್ರಾಯಶ್ಚಿತ್ತ ಹೋಮ, ಶ್ರೀ ಸ್ವಾಮಿಗೆ ನೇತ್ರೋನ್ಮಿಲನ, ಕೂಷ್ಮಾಂಡ ಕದಲಿ ಛೇದನ, ಪೂರ್ಣಾಹುತಿ, ನಾಮಕರಣ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿತು. ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net