

ನುಗ್ಗೇಹಳ್ಳಿ: ಹೋಬಳಿಯ ಮಂಜುನಾಥಪುರ ಗ್ರಾಮದ ಶ್ರೀ ಶನೈಶ್ವರಸ್ವಾಮಿ ಶ್ರೀ ಚಾಮುಂಡೇಶ್ವರಿ ದೇಗುಲಗಳ ಬ್ರಹ್ಮ ಕಳಶ ಪ್ರತಿಷ್ಠಾಪನೆ ಕಾರ್ಯಕ್ರಮ ಏ.2, 3 ಹಾಗೂ 4 ರವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಶ್ರೀ ಶ್ರೀಧರ್ ಸ್ವಾಮೀಜಿ ತಿಳಿಸಿದ್ದಾರೆ.
ಬುಧವಾರ ಸಂಜೆ ಶ್ರೀ ಶನೈಶ್ಚರಸ್ವಾಮಿ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಗಂಗಾಪೂಜೆ, ಏ.3 ರಂದು ಬೆಳಗ್ಗೆ ನವಗ್ರಹ ಪರಿಹಾರ ದೇವತಾ ಸಮೇತ ಕ್ಷೀರವಾಸ, ಧಾನ್ಯ ವಾಸ, ಕಳಸ ಸ್ಥಾಪನೆ, ಸಂಜೆ ಗಣಪತಿ ಪೂಜೆ, ವಾಸ್ತು ಮಂಡಲ ವಾಸ್ತು ಹೋಮ, ಮಹಾಪೂರ್ಣಾಹುತಿ, ಕಳಸ ಸ್ಥಾಪನೆ, ಪ್ರಸಾದ ವಿನಿಯೋಗವಾಗಲಿದೆ. ರಾತ್ರಿ 7 ಗಂಟೆಗೆ ವಿದ್ವಾನ್ ವಿಜಯಕುಮಾರ್ ಅವರಿಂದ ಹರಿಕಥೆ ಕಾರ್ಯಕ್ರಮ ಇದೆ. ಏ.4ರಂದು ಬೆಳಗ್ಗೆ ಸುಪ್ರಭಾತ ಸೇವೆ, ಸರ್ಪವಾದ್ಯ, ದೇವತಾ ಪ್ರಾರ್ಥನೆ, ಗಂಗಾಪೂಜೆ, ಶ್ರೀಶನೈಶ್ವರ ಸ್ವಾಮಿಗೆ ನೇತೃ ಮಿಲನ ಹೋಮ, ಪ್ರಾಣ ಪ್ರತಿಷ್ಠಾಪನೆ, ವಿಮಾನ ಗೋಪುರಕ್ಕೆ ಬ್ರಹ್ಮ ಕಳಸ ಸ್ಥಾಪನೆ, ನವಗ್ರಹ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಶನೈಶ್ಚರ ಹೋಮ, ಮಹಾ ಪೂರ್ಣಾಹುತಿ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಗಲಿದೆ. ಧಾರ್ಮಿಕ ಸಭೆ ಸಂಜೆ 5.30ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎನ್.ಬಾಲಕೃಷ್ಣ, ಸಂಸದ ಶ್ರೇಯಸ್ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಎ.ಸಿ.ಆನಂದ್‌ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಶಶಿಧರ್, ಡಿವೈಎಸ್‌ಪಿ ಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ