ನ.1ರೊಳಗೆ ಕನ್ನಡ ನಾಮಫಲಕ ಅಳವಡಿಸಿ

ಫೋಟೋ ಶೀರ್ಷಿಕೆ 05 ಸಿಆರ್_ಪಿ 1ಎ.
ಚನ್ನರಾಯಪಟ್ಟಣದಲ್ಲಿ ಭೂಮಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕನ್ನಡ ನಾಮಫಲಕ ಅಳವಡಿಕೆ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಚನ್ನರಾಯಪಟ್ಟಣ: ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಸುವರ್ಣ ರಾಜ್ಯೋತ್ಸವ ಆಚರಣೆ ನಡೆಸಲಾಗುತ್ತಿದ್ದು, ಪಟ್ಟಣದಲ್ಲಿನ ಎಲ್ಲ ಅಂಗಡಿ, ಮುಂಗಟ್ಟುಗಳು ಕೈಗಾರಿಕೆ, ಶಾಲಾ-ಕಾಲೇಜುಗಳು ನ.1ರೊಳಗೆ ಕನ್ನಡ ನಾಮಫಲಕ ಅಳವಡಿಕೆಗೆ ಮುಂದಾಗಬೇಕು ಎಂದು ಭೂಮಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಿಳಿಸಿದರು.

ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕನ್ನಡ ಭಾಷೆ, ನೆಲ, ಜಲದ ಋಣ ತೀರಿಸಲು ವರ್ತಕರಿಗೆ, ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗೆ ಜಾಗೃತಿ ಮೂಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎನ್.ರಮೇಶ್ ತಿಳಿಸಿದರು.

ಪಟ್ಟಣದ 23 ವಾರ್ಡ್‌ಗಳಲ್ಲಿರುವ ಅಂಗಡಿಗಳು ಕನ್ನಡ ನಾಮಫಲಕ ಅಳವಡಿಕೆಗೆ ಬದ್ಧವಾಗಬೇಕು, ನಾವು ಇಂಗ್ಲಿಷ್ ವಿರೋಧಿಗಳಲ್ಲ, ಆದರೆ ಮೊದಲ ಆದ್ಯತೆ ನಮ್ಮ ಮಾತೃಭಾಷೆ ಕನ್ನಡಕ್ಕಿರಲಿ ಎಂಬುದು ನಮ್ಮ ನಿಲುವು ಎಂದರು.

ಸಂಘದ ಗೌರವಾಧ್ಯಕ್ಷ ರಾಜಕುಮಾರ್ ಮಾತನಾಡಿ, ಭೂಮಿ ಕ್ಷೇಮಾಭಿವೃದ್ಧಿ ಸಂಘ ಪಟ್ಟಣದಲ್ಲಿ ಕಳೆದ 7 ವರ್ಷಗಳಿಂದ ಸಾಮಾಜಿಕ ಕಳಕಳಿಯ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದೀಗ ಕನ್ನಡ ರಾಜ್ಯೋತ್ಸವ ಸಲುವಾಗಿ ಕನ್ನಡಿಗರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದೆ. ಇದು ಬರೀ ನವೆಂಬರ್ ತಿಂಗಳಿಗೆ ಸೀಮಿತವಲ್ಲ ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿರಿಮೀರಿದ್ದು, ಪುರಸಭೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಪಟ್ಟಣದ ಒಳಚರಂಡಿಗಳ ಕಲುಷಿತ ನೀರು ಹಾಗೂ ಇತರ ತ್ಯಾಜ್ಯ ಅಮಾನಿಕೆರೆಯ ಒಡಲು ಸೇರುತ್ತಿದೆ. ಈಗಾಗಲೇ ಕೆರೆ ದುರ್ವಾಸನೆಯಿಂದ ಗಬ್ಬುನಾರುತ್ತಿದೆ. ಅಮಾನಿಕೆರೆಯ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿನ ನೀರು ಸಹ ಕಲುಷಿತಗೊಂಡು ಅಂತರ್ಜಲ ಮಲಿನವಾಗುತ್ತಿದೆ. ಈ ನೀರನ್ನು ಕುಡಿದ ಗ್ರಾಮೀಣ ಜನರಲ್ಲಿ ಮೈ ಕೆರೆತ, ತುರಿಕೆ ಉಂಟಾಗುತ್ತಿದೆ. ಸಾಂಕ್ರಾಮಿಕ ರೋಗದ ಭೀತಿಯನ್ನು ಜನತೆ ಈಗಾಗಲೇ ಎದುರಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕದಲ್ಲಿ ಕೆರೆ ಸುತ್ತಮುತ್ತಲಿನ ಜನರು ಜೀವನ ಸಾಗಿಸುತ್ತಿದ್ದಾರೆ. ಪುರಸಭೆ ಈ ಕುರಿತಾಗಿ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭೂಮಿ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜೆ.ಸೋಮಶೇಖರ್, ನಿಕಟಪೂರ್ವ ಗೌರವಾಧ್ಯಕ್ಷ ಕೆ.ಆರ್.ನಾಗರಾಜ್, ಗೌರವ ಅಧ್ಯಕ್ಷ ಡಿಶ್‌ಕುಮಾರ್, ತಾಲೂಕು ಉಪಾಧ್ಯಕ್ಷ ಶಂಕರಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net