ಫ್ಯಾನ್ಸ್​ನಲ್ಲಿ ಅಸ್ಥಿರತೆ ತಾಂಡವ; ಒಂದೂವರೆ ವರ್ಷದಿಂದ ಐವರು ಪ್ರಧಾನಿಗಳ ಬದಲಾವಣೆ

Untitled design (17)
Published on

ನೇಪಾಳ ಸಹಜಸ್ಥಿತಿಗೆ ಮರಳುತ್ತಿದ್ದಂತೆಯೇ ಬುಧವಾರ ಫ್ರಾನ್ಸ್ ಹೊತ್ತಿ ಉರಿದಿದೆ. ‘ಬ್ಲಾಕ್ ಎವರಿಥಿಂಗ್’ (ಎಲ್ಲವನ್ನೂ ಸ್ಥಗಿತಗೊಳಿಸೋಣ) ಎಂಬ ಧ್ಯೇಯದೊಂದಿಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಪ್ಯಾರಿಸ್ ಮತ್ತಿತರ ಪ್ರಮುಖ ನಗರಗಳಲ್ಲಿ ಬೆಂಕಿಯ ಜ್ವಾಲೆ ಧಗಧಗಿಸಿದೆ. ಉದ್ರಿಕ್ತ ಪ್ರತಿಭಟನಕಾರರ ಆಕ್ರೋಶಕ್ಕೆ ಬಸ್​ಗಳು ಅಗ್ನಿಗೆ ಆಹುತಿಯಾಗಿವೆ. ವಿದ್ಯುತ್ ಲೈನ್​ಗೆ ಹಾನಿ ಮಾಡಿದ್ದರಿಂದ ರೈಲು ಸಂಚಾರವೂ ಸ್ಥಗಿತವಾಗಿದೆ. ತಡೆಯಲು ಬಂದ ಪೊಲೀಸರ ಜತೆಯೇ ಪ್ರತಿಭಟನಕಾರರು ಘರ್ಷಣೆಗೆ ಇಳಿದಿದ್ದಾರೆ. ಬ್ಯಾರಿಕೇಡ್​ಗಳನ್ನು ಕಿತ್ತೆಸೆದಿದ್ದಾರೆ. ಅಶ್ರುವಾಯು ಪ್ರಯೋಗಿಸಿದರೂ ಪ್ರಯೋಜನವಾಗಿಲ್ಲ. 80 ಸಾವಿರ ಪೊಲೀಸರು ಬಂದೋಬಸ್ತ್​ಗೆ ನಿಯೋಜಿತರಾಗಿದ್ದರೂ ಪ್ರತಿಭಟನಕಾರರು ಜಗ್ಗಿಲ್ಲವೆಂದರೆ ಅವರ ಆಕ್ರೋಶ ಎಷ್ಟಿರಬಹುದೆಂದು ಊಹಿಸಿ.

ಸಾಲದ ಸುಳಿಯಲ್ಲಿ ಸರ್ಕಾರ

ಫ್ರಾನ್ಸ್ ಇಡೀ ಐರೋಪ್ಯ ಒಕ್ಕೂಟದಲ್ಲಿಯೇ ಅತಿ ಹೆಚ್ಚಿನ ತೆರಿಗೆ ಹೊರೆ (ಜಿಡಿಪಿಯ ಶೇ. 43.8) ಹೊಂದಿದೆ. ಸುಮಾರು ಅದರಷ್ಟೇ ಮೊತ್ತವನ್ನು ಪಿಂಚಣಿ, ಸರ್ಕಾರಿ ನೌಕರರ ವೇತನ, ರಕ್ಷಣಾ ವಲಯಕ್ಕೆ ವೆಚ್ಚ ಮಾಡುತ್ತದೆ. ಏರುತ್ತಿರುವ ಬಡ್ಡಿ ದರಗಳಿಂದಾಗಿ ಪ್ರತಿ ವರ್ಷ ಸಾಲದ ಮೇಲೆ 67 ಶತಕೋಟಿ ಯೂರೋ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಪರಿಸ್ಥಿತಿ ಹೀಗಿರುವಾಗ ಶಾಲಾ ಶಿಕ್ಷಣಕ್ಕೆ, ಆರೋಗ್ಯಸೇವೆಗೆ, ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವ್ಯಯಿಸಲು ಹಣ ಎಲ್ಲಿಂದ ಬರಬೇಕು?

ಅಧೋಗತಿ ತಲುಪಿರುವ ಆರ್ಥಿಕತೆ

ಫ್ರಾನ್ಸ್ ರಾಜಕೀಯ ಬಿಕ್ಕಟ್ಟಿನ ಹಿಂದೆ ಆ ರಾಷ್ಟ್ರದ ಹಣಕಾಸು ಅವ್ಯವಸ್ಥೆಯ ಕರಾಳ ನೆರಳಿದೆ. ವಿತ್ತೀಯ ಕೊರತೆ ವಿಪರೀತ ಬೆಳೆದಿದೆ. ಸಿಕ್ಕಾಪಟ್ಟೆ ಸಾಲ, ಅದಕ್ಕಾಗಿ ಮಾಡುತ್ತಿರುವ ಭಾರಿ ವೆಚ್ಚ ಇಡೀ ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಸಾಲದೆಂಬಂತೆ, ವೆಚ್ಚದ ವಿಷಯದಲ್ಲಿ ಸುಧಾರಣೆ ತರಹೊರಟರೆ ಅದನ್ನೂ ಪಾಸು ಮಾಡುವಲ್ಲಿ ಅಸಮರ್ಥವಾದ ಪಾರ್ಲಿಮೆಂಟು.

ಕೋವಿಡ್ ಹಾವಳಿ, ಇಂಧನ ಬಿಕ್ಕಟ್ಟು

ಆರ್ಥಿಕ ಬೆಳವಣಿಗೆ ಸ್ಥಿರವಾಗಿದ್ದರೂ, ಸುಲಭ ದರದಲ್ಲಿ ಸಾಲ ಸಿಕ್ಕರೂ ಫ್ರಾನ್ಸ್ 1973ರಿಂದಲೂ ತನ್ನ ಆಯವ್ಯಯವನ್ನು ಬ್ಯಾಲನ್ಸ್ ಮಾಡಲಿಲ್ಲ. ಮೊದಲು ಆರ್ಥಿಕ ಸಚಿವರಾಗಿ ಮತ್ತು ಈಗ ಅಧ್ಯಕ್ಷರಾಗಿ ಮ್ಯಾಕ್ರನ್ ತೆರಿಗೆ ಕಡಿತ, ವೆಚ್ಚ ಹೊಂದಾಣಿಕೆ, ನಿವೃತ್ತಿ ವಯಸ್ಸಿನ ಏರಿಕೆ (62ರಿಂದ 64) ಮುಂತಾದ ಸುಧಾರಣೆಗಳನ್ನು ತಂದಿದ್ದಾರೆ. ಆದರೆ 2008ರಿಂದಲೂ ಸಾಲ ದೊಡ್ಡ ಪ್ರಮಾಣದಲ್ಲಿದೆ. ಎಷ್ಟೆಂದರೆ ದೇಶದ ಜಿಡಿಪಿಯ ಶೇ. 90ರಷ್ಟು! ಕೋವಿಡ್ ಹಾವಳಿ ಮತ್ತು 2022ರಲ್ಲಿ ಯೂಕ್ರೇನ್ ಮೇಲೆ ರಷ್ಯಾ ಮಾಡಿದ ದಾಳಿಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಕುಟುಂಬಗಳು ಮತ್ತು ವ್ಯಾಪಾರಗಳನ್ನು ರಕ್ಷಿಸಲು ಸರ್ಕಾರ ಸಬ್ಸಿಡಿಗಳ ಮೇಲೆ ವಿಪರೀತ ಖರ್ಚು ಮಾಡಿತು. ಆದರೆ ಇದೇ ವೇಳೆ ಜಗತ್ತಿನಾದ್ಯಂತ ಬಡ್ಡಿ ದರಗಳು ಏರಿಕೆಯಾದವು. ಫ್ರಾನ್ಸ್​ನ ಸಾಲ 2019ರಲ್ಲಿ ಜಿಡಿಪಿಯ ಶೇ. 98ರಷ್ಟು ಇದ್ದದ್ದು 2020ರಲ್ಲಿ ಶೇ. 114ಕ್ಕೆ ಜಿಗಿಯಿತು. ಈಗಲೂ ಅಲ್ಲೇ ಉಳಿದಿದೆ. ವಿತ್ತೀಯ ಕೊರತೆ ಕಳೆದ ವರ್ಷ ಶೇ. 5.8ಕ್ಕೆ ತಲುಪಿದೆ. ಯೂರೋಪಿಯನ್ ಯೂನಿಯನ್​ನ ಶೇ. 3ರ ಮಿತಿಗೆ ಹೋಲಿಸಿದರೆ ಇದು ತೀರಾ ಹೆಚ್ಚಾಗಿದೆ.

ತಪ್ಪು ರಾಜಕೀಯ ಹೆಜ್ಜೆಗಳು

ಯೂರೋಪಿಯನ್ ಸಂಸತ್ತಿನ ಚುನಾವಣೆಯಲ್ಲಿ ತಮ್ಮ ಪಕ್ಷ ಕಳಪೆ ಸಾಧನೆ ತೋರಿದ್ದರಿಂದ ಮ್ಯಾಕ್ರನ್ ಹೊಸದಾಗಿ ಚುನಾವಣೆ ನಡೆಸಲು ಮುಂದಾಗಿದ್ದು ಸರ್ಕಾರವನ್ನು ಮತ್ತಷ್ಟು ಅಸ್ಥಿರವಾಗಿಸಿತು. ಹೊಸ ರಾಷ್ಟ್ರೀಯ ಅಸೆಂಬ್ಲಿ ಒಂದು ರೀತಿಯಲ್ಲಿ ಕಲಸುಮೇಲೋಗರವಾಗಿದೆ. ಎಡರಂಗ, ರಾಷ್ಟ್ರೀಯವಾದಿ ಪಕ್ಷ ಮತ್ತು ಕೇಂದ್ರೀಯವಾದಿಗಳಿದ್ದಾರೆ. ಮಿತವ್ಯಯ ಕ್ರಮಗಳನ್ನು ಸೋಲಿಸುವ ವಿಷಯದಲ್ಲಿ ಅವರೆಲ್ಲ ಒಗ್ಗಟ್ಟಾಗುತ್ತಾರೆ. ಇದರಿಂದಾಗಿಯೇ, ವೆಚ್ಚ ನಿಯಂತ್ರಣ ಕ್ರಮಕ್ಕೆ ಮುಂದಾದ ಗೇಬ್ರಿಯಲ್ ಅಟ್ಟಾಲ್, ಮೈಕೇಲ್ ಬಾರ್ನಿಯರ್ ಮತ್ತು ತೀರ ಇತ್ತೀಚೆಗೆ ಫ್ರಾಂಸ್ವಾ ಬಾಯ್ರು ಈ ಮೂವರು ಪ್ರಧಾನಿಗಳು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು.

ಏಕೆ ಈ ಪ್ರತಿಭಟನೆ?

ಫ್ರಾನ್ಸ್​ನಲ್ಲಿ ಸುಮಾರು ಒಂದು ವಾರ ಕಾಲ ನಡೆದ ರಾಜಕೀಯ ಪ್ರಕ್ಷುಬ್ಧತೆಯ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ. ಸಾರ್ವಜನಿಕ ರಜಾದಿನಗಳ ಕಡಿತ, ಪಿಂಚಣಿಗಳ ಸ್ಥಗಿತ ಸೇರಿದಂತೆ ಹಲವು ಮಿತವ್ಯಯ ಕ್ರಮಗಳಿಗೆ ಪ್ರಧಾನಿ ಫ್ರಾಂಸ್ವಾ ಬಾಯ್ರು ಮುಂದಾಗಿದ್ದರು. ಅದಕ್ಕೆ ಸಂಬಂಧಿಸಿದ ಯೋಜನೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದರು. ಅದರ ಪರ ಕೇವಲ 194 ಸಂಸದರು ಮತ ಚಲಾಯಿಸಿದರೆ, ವಿರುದ್ಧವಾಗಿ 364 ಸಂಸದರು ಮತ ಚಲಾಯಿಸಿದರು. ಪರಿಣಾಮವಾಗಿ ಅವರ ಪ್ರಸ್ತಾವನೆ ಬಿದ್ದುಹೋಯಿತು. ಬಾಯ್ರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಇಮ್ಯಾನುಯೆಲ್ ಮ್ಯಾಕ್ರನ್, ಮಂಗಳವಾರವೇ ಪ್ರಧಾನಿ ಸ್ಥಾನಕ್ಕೆ ರಕ್ಷಣಾ ಸಚಿವರಾಗಿದ್ದ ಸೆಬ್ಯಾಸ್ಟಿಯನ್ ಲೆಕಾರ್ನ ಅವರನ್ನು ನೇಮಕ ಮಾಡಿದರು. ಕಳೆದ ಹನ್ನೆರಡು ತಿಂಗಳುಗಳಲ್ಲಿ ಪ್ರಧಾನಿಯಾಗಿ ನೇಮಕಗೊಳ್ಳುತ್ತಿರುವ ನಾಲ್ಕನೇ ವ್ಯಕ್ತಿ ಇವರು! ಫ್ರಾನ್ಸ್​ನ ರಾಜಕೀಯ ಅಸ್ಥಿರತೆಯನ್ನು ಇದು ಮತ್ತೊಮ್ಮೆ ಎತ್ತಿ ತೋರಿಸಿತು. ಜನರ ಮನಸ್ಸಿನಲ್ಲಿ ಮಡುಗಟ್ಟಿದ್ದ ಆಕ್ರೋಶದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು. ಜನಾಭಿಪ್ರಾಯಕ್ಕೆ ಅಧ್ಯಕ್ಷ ಮ್ಯಾಕ್ರನ್ ಮನ್ನಣೆ ನೀಡುತ್ತಿಲ್ಲವೆಂಬ ಕೂಗಿಗೆ ಇನ್ನಷ್ಟು ಬಲ ಬಂತು. ಸಂಘಟನೆಗಳ ತಳಮಳವನ್ನು ತಣಿಸಲು ಬಾಯ್ರು ರಾಜೀನಾಮೆ ನೀಡಿದ್ದೂ ಸಾಕಾಗಲಿಲ್ಲ. ‘ಇಡೀ ಸರ್ಕಾರ ತೊಲಗಬೇಕು’ ಎಂದವು ಸಂಘಟನೆಗಳು.

ಪರಿಹಾರವೇನು?

ಜಿಡಿಪಿಯ ಶೇ. 5ರಷ್ಟು ಮೌಲ್ಯಕ್ಕೆ ಸರಿಸಮನಾಗುವಷ್ಟು ತೆರಿಗೆ ಹೆಚ್ಚಳ ಮತ್ತು ವೆಚ್ಚ ಕಡಿತ ಕ್ರಮಗಳನ್ನು ಫ್ರಾನ್ಸ್ ಜಾರಿಗೆ ತಂದರೆ ಮಾತ್ರ ಉಳಿಗಾಲ, ಇಲ್ಲದಿದ್ದರೆ ಈ ಸುಳಿಯಿಂದ ಪಾರಾಗಲು ಸಾಧ್ಯವೇ ಇಲ್ಲ. ಅಷ್ಟು ಮಾಡಿದರೂ ಒಮ್ಮೆಲೇ ಎಲ್ಲವೂ ಸರಿಹೋಗುವುದಿಲ್ಲ. ಅದಕ್ಕೆ ಕೆಲವು ವರ್ಷಗಳೇ ಬೇಕು. ಗ್ರೀಸ್ ಇದಕ್ಕಿಂತ ಕೆಟ್ಟ ಸ್ಥಿತಿಯಲ್ಲಿತ್ತು. ಅತ್ಯಂತ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಾಲದ ಸುಳಿಯಿಂದ ಪಾರಾಯಿತು. ಆದರೆ, ಇದನ್ನೆಲ್ಲ ಮಾಡಲು ಹೋದರೆ ರಾಜಕೀಯವಾಗಿ ಪೆಟ್ಟು ತಿನ್ನಬೇಕಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದರಲ್ಲಿ ಸ್ವಲ್ಪ ಮಾತ್ರ ಜಾರಿ ಮಾಡಲು ಮುಂದಾದ ಬಾಯ್ರು ಪ್ರಧಾನಿ ಪಟ್ಟವನ್ನೇ ಕಳೆದುಕೊಳ್ಳಬೇಕಾಯಿತು.

‘ಬ್ಲಾಕ್ ಎವರಿಥಿಂಗ್’ನ ಉದಯ

ದೇಶದ ಅವ್ಯವಸ್ಥೆಯನ್ನೆಲ್ಲ ಸರಿಪಡಿಸಬೇಕೆಂದು ಆಗ್ರಹಿಸಿ ‘ಬ್ಲಾಕ್ ಎವರಿಥಿಂಗ್’ ಎಂಬ ಅಭಿಯಾನ ಕಳೆದ ಬೇಸಿಗೆಯಲ್ಲಿ ಟಿಕ್​ಟಾಕ್, ಎಕ್ಸ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಯಿತು. ಅದು ಕರೆ ಕೊಡುತ್ತಿದ್ದ ಮುಷ್ಕರ, ಬಹಿಷ್ಕಾರ, ಪ್ರತಿಭಟನೆಗಳಿಗೆ ಕಾರ್ವಿುಕರು, ವಿದ್ಯಾರ್ಥಿಗಳು, ಕಾರ್ಯಕರ್ತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿತು. ಮ್ಯಾಕ್ರನ್ ಅನುಸರಿಸುತ್ತಿರುವ ನೀತಿಗಳಿಂದಾಗಿ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ ಎಂಬ ವಾದಕ್ಕೆ ಬಲ ಸಿಕ್ಕಿತು. ಈ ಆಂದೋಲನಕ್ಕೆ ನಿರ್ದಿಷ್ಟ ಮುಂದಾಳತ್ವ ಇಲ್ಲ. ಹಾಗಾಗಿ ಇದು ಯಾವಾಗ ಏನು ಕರೆ ಕೊಡುತ್ತೋ ಅಂತ ಮೊದಲೇ ಊಹಿಸಲು ಅಧಿಕಾರಸ್ಥರಿಗೆ, ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದರೂ ಅನಿರೀಕ್ಷಿತವಾಗಿ ಹಿಂಸಾಚಾರ ಸಂಭವಿಸುತ್ತದೆ. ಬುಧವಾರ ಆಗಿದ್ದೂ ಅದೇ.

ಪ್ರತಿಭಟನೆಗೆ ಹಲವು ರೂಪ

ಆನ್​ಲೈನ್ ಕ್ಯಾಂಪೇನ್, ರಸ್ತೆ ತಡೆ, ಬ್ಯಾಂಕ್​ಗಳಿಂದ ಹಣ ವಿತ್​ಡ್ರಾ ಮಾಡುವುದು, ಅಮೆಜಾನ್ ಕ್ಯಾರಿಫೋರ್​ನಂತಹ ಕಂಪನಿಗಳನ್ನು ಬಹಿಷ್ಕರಿಸುವುದು ಹೀಗೆ ಹತ್ತು ಹಲವು ರೂಪದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಇದು 2028-19ರಲ್ಲಿ ನಡೆದ ‘ಯೆಲ್ಲೋ ವೆಸ್ಟ್’ ಪ್ರತಿಭಟನೆಯನ್ನು ನೆನಪಿಸುತ್ತದೆ. ಮೊದಮೊದಲು ಇಂಧನ ತೆರಿಗೆ ಹೆಚ್ಚಳದ ವಿರುದ್ಧ ಶುರುವಾದ ಪ್ರತಿಭಟನೆಗಳು ನಿಧಾನವಾಗಿ ಮ್ಯಾಕ್ರನ್ ವಿರೋಧಿ ಚಳವಳಿಯಾಗಿ ಮಾರ್ಪಟ್ಟವು.

ಭಾರಿ ಒತ್ತಡದಲ್ಲಿ ಮ್ಯಾಕ್ರನ್

ಪ್ರಧಾನಿಯಾಗಿ ಲೆಕಾರ್ನ ನೇಮಕಗೊಂಡ ಮರುದಿನವೇ ಫ್ರಾನ್ಸ್​ನಾದ್ಯಂತ ಈ ಪ್ರತಿಭಟನೆಗಳು ನಡೆದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಅಧ್ಯಕ್ಷ ಮ್ಯಾಕ್ರನ್​ಗೆ ತಲೆನೋವಾಗಿ ಪರಿಣಮಿಸಿದೆ. ‘ತಮ್ಮದೇ ಮತ್ತೊಬ್ಬ ಅನುಯಾಯಿಯನ್ನು ಮ್ಯಾಕ್ರನ್ ಅಧಿಕಾರದ ಗದ್ದುಗೆಗೆ ಏರಿಸಿದ್ದಾರೆ ಅಷ್ಟೇ, ಮೂಲ ಸಮಸ್ಯೆ ಹಾಗೇ ಉಳಿದಿದೆ. ಮ್ಯಾಕ್ರನ್ ನಿರ್ಗಮಿಸಿದರೆ ಮಾತ್ರ ಈ ಸಮಸ್ಯೆಗೊಂದು ಪರಿಹಾರ ಸಿಗಬಹುದು’ ಎಂದು ವಿರೋಧ ಪಕ್ಷಗಳ ನಾಯಕರು ಹರಿಹಾಯ್ದಿದ್ದಾರೆ.

ಅಸ್ಥಿರತೆಯ ಪರಾಕಾಷ್ಠೆ

39 ವರ್ಷದ ಲೆಕಾರ್ನ ಅವರು ಮ್ಯಾಕ್ರನ್ ತಮ್ಮ ಎರಡನೇ ಅಧ್ಯಕ್ಷಾವಧಿಯಲ್ಲಿ ನೇಮಕ ಮಾಡಿರುವ ಐದನೇ ಪ್ರಧಾನಿ. ಕಳೆದ ಒಂದೇ ವರ್ಷದಲ್ಲಿ ಮೂರನೆಯವರು. ಬಾಯ್ರು ಅಧಿಕಾರದಲ್ಲಿದ್ದದ್ದು ಕೇವಲ 9 ತಿಂಗಳು. ಅವರ ಹಿಂದಿನ ಪ್ರಧಾನಿ ಕೇವಲ 3 ತಿಂಗಳು ಅಧಿಕಾರದಲ್ಲಿದ್ದರು. ಪ್ರತಿಭಟನೆಗಳು ನಡೆಯುತ್ತಿರುವಾಗ ಪ್ರಧಾನಿ ಸ್ಥಾನ ಖಾಲಿ ಇದ್ದರೆ ಅಪಾಯಕಾರಿ ಎಂದು ಯೋಚಿಸಿದ ಮ್ಯಾಕ್ರನ್ ಬಹುಬೇಗ ಲೆಕಾರ್ನ ಅವರನ್ನು ನೇಮಿಸಿದರು. ಮಿತವ್ಯಯ ಕ್ರಮಗಳಿಗೆ ಒಪ್ಪಿಗೆ ಪಡೆಯುವ ಜವಾಬ್ದಾರಿ ಈಗ ಲೆಕಾರ್ನ ಮೇಲೆ ಬಿದ್ದಿದೆ. ಆದರೆ ಮುಂಚಿನ ಪ್ರಧಾನಿಗಳಿಗಾದ ಗತಿಯೇ ಇವರಿಗೂ ಕೆಲವೇ ದಿನಗಳಲ್ಲಿ ಆಗಬಹುದು ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಮಿತವ್ಯಯ ಕ್ರಮಕ್ಕೆ ಜನರ ವಿರೋಧ...

ಪ್ರಸ್ತಾವಿತ ಮಿತವ್ಯಯ ಕ್ರಮಗಳ ಬಗೆಗಿನ ಆಕ್ರೋಶವೇ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿದೆ. ದೇಶದ 43 ಶತಕೋಟಿ ಯೂರೋ ಕೊರತೆಯನ್ನು ಸರಿದೂಗಿಸಲು ರಜೆ ಕಡಿತ, ಪಿಂಚಣಿ ಸ್ಥಗಿತ, ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನ ಸ್ಥಗಿತ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿರುವುದು ಜನರ ಕಣ್ಣು ಕೆಂಪಗಾಗಿಸಿದೆ. ‘ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಮ್ಮ ಮೇಲೇಕೆ ಹೊರೆ ಹಾಕುತ್ತಿದ್ದೀರಿ’ ಎಂಬುದು ಜನರ ಪ್ರಶ್ನೆ.

ಮುಂದೇನು?

ಪ್ರಧಾನಿ ಸ್ಥಾನಕ್ಕೆ ಬಾಯ್ರು ರಾಜೀನಾಮೆ ನೀಡಿದರೂ ಈ ಕಠಿಣ ಮಿತವ್ಯಯ ಕ್ರಮಗಳನ್ನು ಅಧ್ಯಕ್ಷ ಮ್ಯಾಕ್ರನ್ ಮುಂದುವರಿಸುತ್ತಾರೆ ಎಂಬ ಶಂಕೆ ಜನರ ಮನಸ್ಸಿನಲ್ಲಿದೆ. ಹೀಗಾಗಿ ಫ್ರಾನ್ಸ್​ನಲ್ಲಿ ಪ್ರತಿಭಟನೆಗಳು ಮತ್ತೆ ಯಾವ ಕ್ಷಣದಲ್ಲಾದರೂ ಭುಗಿಲೇಳಬಹುದು. ಸೆ. 18ರಂದು ಪ್ರತಿಭಟನೆ ನಡೆಸುವುದಾಗಿ ವಿಮಾನ ಯಾನ ನಿಯಂತ್ರಣ ಸಿಬ್ಬಂದಿ ಸಂಘಟನೆ ಈಗಾಗಲೇ ಬೆದರಿಕೆ ಹಾಕಿದೆ. ಆಗ ಮತ್ತೊಮ್ಮೆ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಏಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net