

ಭುವನೇಶ್ವರ: ಯಾವುದೇ ವಾಹನ ರಿಪೇರಿ ಮಾಡುವ ಗ್ಯಾರೇಜ್ ನೋಡಿದರೂ ಕಾಣಸಿಗುವವರು ಪುರುಷರು. ಅಪಾರ ಸಂಖ್ಯೆಯಲ್ಲಿ ಜನರು ಮೆಕ್ಯಾನಿಕ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೆಕ್ಯಾನಿಕ್ ವೃತ್ತಿಗೆ ಬರಲು ಮಹಿಳೆಯರು ಹಿಂದೇಟು ಹಾಕುತ್ತಾರೆ. ಆದರೆ ಒಡಿಸ್ಸಾದ ಯುವತಿಯೊಬ್ಬಳು ಮೆಕ್ಯಾನಿಕ್ ವೃತ್ತಿ ಮಾಡುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾಳೆ.
ಬುಲೆಟ್ ಬೈಕ್ಗಳನ್ನು ರಿಪೇರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ತಿಳುವಳಿಕೆ ಇದ್ದಾಗ ಮಾತ್ರ ವಾಹನ ಮಾಲೀಕರನ್ನು ತೃಪ್ತಿ ಪಡಿಸಬಹುದು. ಆದರೆ ಈ ಯುವತಿ ಸಲೀಸಲಾಗಿ ಬುಲೆಟ್ ಬೈಕ್ನ್ನು ರಿಪೇರಿ ಮಾಡುತ್ತಿದ್ದಾಳೆ.
ಕ್ರೋಧಾ ಜಿಲ್ಲೆಯ ಗೋವಿಂದಾಪುರ ಗ್ರಾಮದ ಯುವತಿ ಚಂಪಾಬತಿ ಮಹಾರಾಣ ಬೈಕ್ ಮೆಕ್ಯಾನಿಕ್ ಗುರುತಿಸಿಕೊಂಡಿದ್ದಾಳೆ. ಮನೆಯಲ್ಲಿ ತೀರಾ ಬಡತನ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ. ಅಂತಿಮ ವರ್ಷದದ ಪದವಿಯಲ್ಲಿದ್ದಾಗ ಅರ್ಧದಿಂದಲೇ ವ್ಯಾಸಾಂಗ ನಿಲ್ಲಿಸುತ್ತಾಳೆ. ಮುಂದೇನು ಮಾಡುವುದು ಎಂದು ಆಲೋಚಿಸಿದಾಗ ಹೊಳೆದದ್ದು, ಮೆಕ್ಯಾನಿಕ್ ವೃತ್ತಿ.
ಚಂಪಾಬತಿಗೆ ಮೊದಲಿನಿಂದಲೂ ಮೆಕ್ಯಾನಿಕ್ ಕ್ಷೇತ್ರದತ್ತ ಅತೀವವಾದ ಆಸಕ್ತಿ. ಹೀಗಾಗಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸಬಹುದು ಎಂಬುವುದನ್ನು ಅರಿತುಕೊಂಡು, ನೇರವಾಗಿ ಬುಲೆಟ್ ಬೈಕ್ ಶೋರೂಂಗೆ ತೆರಳುತ್ತಾಳೆ. ಅಲ್ಲಿ ತನ್ನ ಇಂಗಿತವನ್ನು ಹೇಳಿಕೊಂಡು ನಿಷ್ಠೆಯಿಂದ ವೆಕ್ಯಾನಿಕ್ ವೃತ್ತಿಯನ್ನು ಕಲಿತುಕೊಳ್ಳುತ್ತಾಳೆ.
ಕಡಿಮೆ ಸಮಯದಲ್ಲಿ ಬುಲೆಟ್ ಬೈಕ್ ರಿಪೇರಿ ಮಾಡುವುದನ್ನು ಕಲಿತುಕೊಂಡ ಚಂಪಾಬತಿ, ಇದೀಗ ಭುವನೇಶ್ವರದಲ್ಲಿ ಜನಪ್ರಿಯ ಮೆಕ್ಯಾನಿಕ್. ಅನೇಕ ಮಂದಿ ತಮ್ಮ ಬೈಕ್ ರಿಪೇರಿ ಇದ್ದಾಗ ಮೊದಲು ಸಂಪರ್ಕಿಸುವುದು ಚಂಪಾಬತಿ ಅವರನ್ನು. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ತನ್ನಿಷ್ಟದ ಕ್ಷೇತ್ರವಾದ ಮೆಕ್ಯಾನಿಕ್ ವೃತ್ತಿಯನ್ನು ಮಾಡುತ್ತಾ ಆದಾಯದ ಮೂಲ ಕಂಡುಕೊಂಡಿದ್ದಾರೆ. (ಏಜೆನ್ಸೀಸ್)