ಸಾಧಕರ ಜೀವನಚರಿತ್ರೆ ಅಧ್ಯಯನದಿಂದ ಸ್ಫೂರ್ತಿ

13-byakodu-photo-college
ತುಮರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರತ್ನಾಕರ ಕುನಗೋಡು, ಜಿ.ಟಿ.ಸತ್ಯನಾರಾಯಣ, ಓಂಕಾರ್ ಜೈನ್, ಹರೀಶ್ ಇತರರಿದ್ದರು.
Published on

ಬ್ಯಾಕೋಡು: ಯಶಸ್ಸಿನ ಬಗ್ಗೆ ಹಂಬಲಿಸುವುದು ಮನುಷ್ಯ ಸಹಜ ಬಯಕೆ. ಆದರೆ ನಿರಂತರ ಕಾರ್ಯಯೋಜನೆ, ಗುರಿ ತಲುಪುವ ಕ್ರಿಯಾಶೀಲತೆ ಕೊರತೆ ಯುವಜನರನ್ನು ಕಾಡುತ್ತಿದೆ ಎಂದು ರಿಪ್ಪನ್‌ಪೇಟೆ ಕಾಲೇಜಿನ ಪ್ರಾಧ್ಯಾಪಕ ರತ್ನಾಕರ ಕುನಗೋಡು ಅಭಿಪ್ರಾಯಪಟ್ಟರು.

ತುಮರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ ಮತ್ತು ಸಾಂಸ್ಕೃತಿಕ ವೇದಿಕೆಯ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಾಧನೆ ಎನ್ನುವುದು ಅಂಕ ಗಳಿಸುವ ಪ್ರಕ್ರಿಯೆ ಮಾತ್ರವಲ್ಲ ಎಂದರು.

ಜಗತ್ತಿನ ವಿದ್ಯಮಾನದ ಜತೆ ಅನುಸಂಧಾನ ನಡೆಸುವ ಭಾಗವಾಗಬೇಕು. ವಿದ್ಯಾರ್ಥಿಗಳು ಜಗತ್ತಿನ ಸಾಧಕರ ಜೀವನಚರಿತ್ರೆ ಓದಿಕೊಂಡು ಕಷ್ಟಗಳನ್ನು ಎದುರಿಸಲು ಸ್ಫೂರ್ತಿ ಪಡೆಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಷ್ಟಪಟ್ಟು ಶಿಕ್ಷಣ ಪಡೆಯುತ್ತಾರೆ. ಅವರಲ್ಲಿರುವ ಕಲೆ ಹಾಗೂ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಕಾಲೇಜು ಆಡಳಿತದ ಮೇಲಿದೆ ಎಂದು ತಿಳಿಸಿದರು.

ಕೆಡಿಪಿ ನಾಮನಿರ್ದೇಶಿತ ಸದಸ್ಯ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಎಲ್ಲರಿಗೂ ಶಿಕ್ಷಣ ದೊರೆಯಲು ಸಂವಿಧಾನ ಕಾರಣ. ಸಮುದಾಯಗಳ ಪ್ರಗತಿ ಇನ್ನಷ್ಟು ಆಗಬೇಕಿದೆ. ವಿದ್ಯಾವಂತ ಯುವಜನರು ಸಾಮಾಜಿಕ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಡಿಸಿ ಉಪಾಧ್ಯಕ್ಷ ಓಂಕಾರ್ ಜೈನ್, ಪ್ರಾಚಾರ್ಯ ಹರೀಶ್, ಉಪನ್ಯಾಸಕ ಸುಬ್ರಹ್ಮಣ್ಯ, ಪ್ರಿಯಾ, ಕಾಲೇಜು ಸಮಿತಿ ಸದಸ್ಯರಾದ ವಿಜಯ, ಸಂಧ್ಯಾ ಪ್ರಕಾಶ್, ರವಿ, ರವೀಂದ್ರ, ಜೋಸೆಫ್, ಕೃಷ್ಣ ಭಂಡಾರಿ, ಮಣಿಕಂಠ, ಈಶ್ವರಿ, ಸ್ವಾತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net