ಮಹಾತ್ಮರ ಜೀವನಾದರ್ಶ ಸಾಧನೆಗೆ ಪ್ರೇರಣೆ

TKE malama
ಬಗ್ಗವಳ್ಳಿಯಲ್ಲಿ ಏರ್ಪಡಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದ್ವಾದಶ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯನ್ನು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಿ.ಎಸ್.ರಾಜು, ಡಾ.ಶೇಖರಗೌಡ ಮಾಲಿಪಾಟೀಲ್, ಅನಿಲ್‌ಕುಮಾರ್ ಇತರರಿದ್ದರು.
Published on

ತರೀಕೆರೆ: ಮಹಾತ್ಮರ ಜೀವನಾದರ್ಶ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಧನೆಗೆ ಪ್ರೇರಣೆ ದೊರೆಯಲಿದೆ ಎಂದು ಶ್ರೀಶೈಲ ಪೀಠದ ಡಾ. ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭಾನುವಾರ ಬಗ್ಗವಳ್ಳಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ 12ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ವಚನಕಾರರು ಜೀವನದಲ್ಲಿ ಮಾನವೀಯ ಮೌಲ್ಯ ಬಿತ್ತುವ ಕೆಲಸದ ಜತೆ ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಡಿದ್ದು ಅವರು ಹಾಕಿದ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು. ಈ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದರು.
ಭಾರತೀಯ ಸೈನ್ಯದ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಮಾತನಾಡಿ, ಜೀವಿತಾವಧಿಯಲ್ಲಿ ಮಾಡುವ ಸಾಧನೆ ಸಾರ್ಥಕತೆಗೆ ಸಾಕ್ಷಿಯಾಗಲಿದೆ. ಭಾರತೀಯರಾಗಿ ಹುಟ್ಟಿದ ಮೇಲೆ ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರತಿ ಕುಟುಂಬದಿಂದ ಒಬ್ಬರಾದರೂ ಸೇನೆಯಲ್ಲಿ ಸೇವೆ ಮಾಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಹೇಮರಡ್ಡಿ ಮಲ್ಲಮ್ಮ ಯುವ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ, ಕೆಲ ರಾಜಕೀಯ ನಾಯಕರು ವೀರಶೈವ ಲಿಂಗಾಯತ ಸಮಾಜ ಹಾಗೂ ಹೇಮರಡ್ಡಿ ಮಲ್ಲಮ್ಮ ಸಮುದಾಯದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಸಮುದಾಯ ಜಾಗೃತವಾಗಿ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ಈ ಮೂಲಕ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶ ಪರಿಪಾಲಿಸಬೇಕು ಎಂದರು.
ಧಾರ್ಮಿಕ ಸಭೆಯಲ್ಲಿ ರೆಡ್ಡಿ ಲಿಂಗಾಯತ ಸಮುದಾಯದ ರಾಜ್ಯಾಧ್ಯಕ್ಷ ಡಾ.ಶೇಖರಗೌಡ ಮಾಲಿ ಪಾಟೀಲ್, ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನ ಮೂರ್ತಿ ಭಾವಚಿತ್ರ ಅನಾವರಣಗೊಳಿಸಿ ಸಾಮರ್ಥ್ಯ-ಸವಾಲು ಮತ್ತು ಪರಿಹಾರ ವಿಷಯ ಕುರಿತು ಉಪನ್ಯಾಸ ನೀಡಿದರು. ರಂಭಾಪುರಿ ಶಾಖಾಮಠದ ಯಡಿಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಸದಾಶಿವಮೂರ್ತಿ, ಡಾ.ವಾಮದೇವ್, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾಲೂಕು ಲಿಂಗಾಯತ ರೆಡ್ಡಿ ಸಮುದಾಯದ ಅಧ್ಯಕ್ಷ ಜಿ.ಬಿ.ಹೇಮಂತ್‌ಕುಮಾರ್, ಪ್ರಮುಖರಾದ ಮರುಳ ಸಿದ್ದಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net