

ಶಿವಮೊಗ್ಗ: ಸಂಚಾರ ಪೊಲೀಸ್ ವಿಭಾಗದ ಸಿಪಿಐ ಬಿ.ಕೆ.ಲತಾ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳನ್ನು ಪರಿಶೀಲಿಸಿದರು.
ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆಯೇ ಎಂಬುದನ್ನು ತಪಾಸಣೆ ಮಾಡಲಾಯಿತು. ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ ದಾಖಲಾತಿಗಳಾದ ಆರ್.ಸಿ.(ನೋಂದಣಿ ಪ್ರಮಾಣ ಪತ್ರ), ಹೊಗೆ ತಪಾಸಣಾ ಪ್ರಮಾಣ ಪತ್ರ, ವಿಮೆ, ವಾಹನ ಚಾಲನಾ ಪರವಾನಗಿ ಮುಂತಾದವುಗಳನ್ನು ಪರಿಶೀಲಿಸಿದರು.
ಶಾಲಾ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರುವುದನ್ನು ಖಾತ್ರಿಪಡಿಸಿಕೊಳ್ಳಲಾಯಿತು. ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ವಿವರಿಸಲಾಯಿತು. ಅತಿವೇಗ, ಅಜಾಗರೂಕವಾಗಿ, ಮದ್ಯ ಸೇವಿಸಿ ವಾಹನ ಚಲಾಯಿಸಬಾರದು. ಡ್ರೈವಿಂಗ್ ಮಾಡುವಾಗ ಫೋನ್ ಬಳಸಬಾರದು ಎಂದು ಸಿಪಿಐ ಬಿ.ಕೆ.ಲತಾ ಸೂಚಿಸಿದರು.