ಅನಿದ್ರಾವರ್ಜನರಸಾಯನ

sleep
Published on

ಅನಿದ್ರಾವರ್ಜನ ಎಂದರೆ ನಿದ್ರೆಗೆಡದೇ ಇರುವುದು ಅರ್ಥಾತ್ ಸುಖನಿದ್ರೆ. ಮಕ್ಕಳಂತೆ ನಿಶ್ಚಿಂತವಾಗಿ ನಿದ್ರಿಸುವದು. ಇಂತಹ ನಿದ್ರೆಯೂ ಚರಕ ಮಹರ್ಷಿಗಳ ದೃಷ್ಟಿಯಲ್ಲಿ ಒಂದು ದಿವ್ಯ ರಸಾಯನ ವಿದ್ದಂತೆ. ನಿದ್ರೆಗೆ ಸುಷುಪ್ತಿ ಎಂತಲೂ ಕರೆಯುತ್ತಾರೆ. ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿಗಳು ಸಕಲ ಜೀವಿಗಳಿಗೆ ದೊರೆತ ಮೂರು ಅವಸ್ಥೆಗಳು. ಜಾಗ್ರತ್ ಮತ್ತು ಸ್ವಪ್ನಾವಸ್ಥೆಗಳಲ್ಲಿ ನಮ್ಮ ಮನೋ ಬುದ್ಧಿಗಳು ಶರೀರ ಹಾಗೂ ಇಂದ್ರಿಯಗಳನ್ನು ಬಳಸಿಕೊಂಡು ಶಬ್ದ ಸ್ಪರ್ಶಾದಿ ವಿಷಯಗಳ ಮುಖಾಂತರ ಸುಖ ದುಃಖಗಳನ್ನು ಅನುಭವಿಸುತ್ತವೆ. ಈ ಸಮಯದಲ್ಲಿ ರಾಗದ್ವೇಷಗಳ ಪ್ರಾಬಲ್ಯವಿರುವುದರಿಂದ ಶರೀರದಲ್ಲಿಯ ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳು ವಿಷಮಾವಸ್ಥೆಯನ್ನು ಹೊಂದುತ್ತವೆ. ಅಂತೆಯೇ ಶರೀರವು ವಿವಿಧ ರೋಗಗಳಿಗೆ ತುತ್ತಾಗುತ್ತದೆ.

ಆದರೆ ಮನುಷ್ಯನ ಮನೋ ಬುದ್ಧಿಗಳು ಮತ್ತು ಇಂದ್ರಿಯಗಳು ತಮ್ಮ ತಮ್ಮ ವ್ಯವಹಾರದಿಂದ ಯಾವಾಗ ವಿರತವಾಗುವವೋ ಆಗ ಸುಷುಪ್ತಾವಸ್ಥೆಗೆ ಹೋಗುತ್ತದೆ. ಆಗ ಶರೀರವು ತನ್ನಲ್ಲಿಯ ತ್ರಿದೋಷಗಳನ್ನು ಸಮವಾಗಿ ಮಾಡಿ ಶರೀರವನ್ನು ಸ್ವಸ್ಥವಾಗಿರಿಸಿಕೊಳ್ಳುತ್ತದೆ. ಶರೀರವು ಸ್ವಸ್ಥವಾಗಿರಲು ಅನ್ನ ನೀರುಗಳಷ್ಟೇ ನಿದ್ರೆಯೂ ಪ್ರಮುಖವಾದುದು. ಅನಿದ್ರೆಯು ಅನಾರೋಗ್ಯಕ್ಕೆ ಕಾರಣವು. ಅಂತೆಯೇ ನಿದ್ರೆಯು ನಿಸರ್ಗದತ್ತವಾದ ಆರೋಗ್ಯಸಾಧನ. ಶರೀರವು ದೇವ ನಿರ್ವಿುತವಾದ ಒಂದು ಯಂತ್ರ. ಈ ದೇಹದಲ್ಲಿ ಚಯ ಅಪಚಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ದೇಹದಲ್ಲಿ ಉಂಟಾದ ಕುಂದು ಕೊರತೆಗಳನ್ನು ಶರೀರವು ನಿದ್ರಾವಸ್ಥೆಯಲ್ಲಿ ಸರಿಪಡಿಸುತ್ತಿರುತ್ತದೆ. ಜಾಗೃತ್ ಮತ್ತು ಸ್ವಪ್ನಾವಸ್ಥೆಗಳಲ್ಲಿ ನಮ್ಮ ಮನೋ ಬುದ್ಧಿಗಳು ವಿವಿಧ ವಿಚಾರದಲ್ಲಿ ತೊಡಗಿರುವುದರಿಂದ ಆ ವಿಚಾರಕ್ಕನುಗುಣವಾಗಿ ಶರೀರವು ಸ್ಪಂದಿಸುತ್ತಿರುತ್ತದೆ.ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಅಂದರೆ ನಾಲ್ಕು ಗಂಟೆಗಳ ಈ ಕಾಲಾವಧಿಯು ನಿದ್ರೆಯ ಮಹತ್ವಪೂರ್ಣವಾದ ಸಮಯ.ಈ ಸಮಯದಲ್ಲಿ ನಿದ್ರೆಗೆ ಜಾರಬೇಕು. ಆಗ ಮಾತ್ರ ಶರೀರದ ಎಲ್ಲ ಅವಯಗಳು ಸ್ವಸ್ಥವಾಗಿರುತ್ತವೆ. ಅಂತೆಯೇ ಚರಕಮರ್ಷಿಗಳು ಅನಿದ್ರಾ ವರ್ಜನೆಯನ್ನು ಸಹ ಒಂದು ರಸಾಯನವನ್ನಾಗಿ ಬೋಧಿಸಿದ್ದಾರೆ. ಅನಿದ್ರಾವರ್ಜನೆಯನ್ನು ಮಾಡಿದಂತೆ ಅತಿನಿದ್ರೆಯನ್ನೂ ವರ್ಜಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net