

ಕೋಲಾರ: ತಾಲೂಕಿನ ಕೋರಗೊಂಡಹಳ್ಳಿಯ ಚೌಡೇಶ್ವರಿ ದೇವಾಲಯ ಸಮೀಪ ಅಪ್ರಕಟಿತ ಶಾಸನ ಪತ್ತೆಯಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಪ್ಪ ಅರಿವು ಮತ್ತು ಮಾಲೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪಿ.ಗೋಪಿ ಶುಕ್ರವಾರ ಪತ್ತೆ ಮಾಡಿದ್ದಾರೆ.
ಶಾಲಿವಾಹನ ಶಕವರ್ಷ 1488ನೇ (ಕ್ರಿ.ಶ.1566) ವರ್ಷದಲ್ಲಿ ಕೋರಗೊಂಡನಹಳ್ಳಿಯಲ್ಲಿ ಬಯಿರಪ್ಪ ಎಂಬಾತನು ತಂದೆ&ತಾಯಿಗಳಿಗೆ ಪುಣ್ಯವಾಗಲೆಂದು ತಿರುಮಲ ದೇವರು ಮತ್ತು ಚೌಡೇಶ್ವರಿ ಗುಡಿ ಕಟ್ಟಿಸಿ ಹೊಲಗದ್ದೆಗಳನ್ನು ದಾನ ಮಾಡಿರುವ ವಿಚಾರ ಶಾಸನದಲ್ಲಿ ಪ್ರಸ್ತಾಪಗೊಂಡಿದೆ. ಈ ಶಾಸನವನ್ನು ಓದಲು ಶಾಸನತಜ್ಞ ಕೆ.ಆರ್.ನರಸಿಂಹನ್ ನೆರವಾಗಿದ್ದಾರೆ.
ಇದೊಂದು ಕನ್ನಡ ಶಾಸನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಅಂತಿಮ ಕಾಲಘಟ್ಟದ್ದಾಗಿದೆ. ಸ್ಥಳಿಯರಾದ ಬಯಿರಪ್ಪ ಶಾಸನವನ್ನು ಬರೆಸಿದ್ದಾರೆ. ಈ ಶಾಸನದ ಪಕ್ಕದಲ್ಲೇ ಹಲವು ವೀರಗಲ್ಲುಗಳಿದ್ದು, ಮಡಿದ ವೀರರನ್ನು ನೆನಪಿಸುತ್ತದೆ. ಶಾಸನದಲ್ಲಿ ಪ್ರಸ್ತಾಪಗೊಂಡಿರುವ ತಿರುಮಲ ದೇವರ ಗುಡಿ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಜತೆಗೆ ಚೌಡೇಶ್ವರಿ ದೇವಾಲಯದಲ್ಲೂ ಮೂಲವಿಗ್ರಹಗಳು ಕಾಣುತ್ತಿಲ್ಲ ಎಂದು ಶಿವಪ್ಪ ತಿಳಿಸಿದ್ದಾರೆ.