

ಕಾರವಾರ: ಭಾರತೀಯ ನೌಕಾಸೇನೆಯ (ಇಂಡಿಯನ್ ನೇವಿ) ಎರಡನೇ ಬೃಹತ್ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾನೆಲೆ ತಲುಪಿದೆ.
2022 ರ ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಗೊಂಡಿರುವ ಭಾರತೀಯ ತಂತ್ರಜ್ಞಾನ ಹಾಗೂ ನಿರ್ಮಾಣದ ಮೊದಲ ಯುದ್ಧ ವಿಮಾನ ವಾಹಕ ನೌಕೆ ವಿಕ್ರಾಂತ್‌ನ್ನು ಶನಿವಾರ ಕದಂಬ ಜಟ್ಟಿಯಲ್ಲಿ (ಹಡಗು ನಿಲ್ದಾಣ) ಯಶಸ್ವಿಯಾಗಿ ತಂದು ನಿಲ್ಲಿಸಲಾಯಿತು.
ವಿಶೇಷ ಎಂದರೆ ಕಾರವಾರದಲ್ಲಿ ಸೀಬರ್ಡ್ ನೌಕಾ ಯೋಜನೆಯ -2ಎ ಭಾಗವಾಗಿ ನಿರ್ಮಾಣವಾಗಿರುವ ಸುಮಾರು 4 ಕಿಮೀ ಉದ್ದದ ಹೊಸ ಜಟ್ಟಿಯಲ್ಲಿ ಮೊದಲ ಬಾರಿಗೆ ದೊಡ್ಡ ನೌಕೆಯೊಂದು ಬಂದು ನಿಂತಿದೆ.
ಭಾರತೀಯ ನೌಕಾಸೇನೆ ರಷ್ಯಾದಿಂದ ಖರೀದಿ ಮಾಡಿದ ಯುದ್ಧ ವಿಮಾನ ವಾಹಕ ವಿಕ್ರಮಾದಿತ್ಯ ಹಡಗು ಈಗಾಗಲೇ ಕಾರವಾರದಲ್ಲಿ ನೆಲೆ ನಿಂತಿದೆ.
ಅಲ್ಲದೆ, ಇನ್ನೂ 11 ಪ್ರಮುಖ ಯುದ್ಧ ನೌಕೆಗಳು ಇಲ್ಲಿವೆ. ಈಗ 2012 ರಿಂದ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾರ್ಯ ನಡೆದಿದೆ.
ಅದರಲ್ಲಿ ಹೆಚ್ಚುವರಿ ಜಟ್ಟಿಗಳ ನಿರ್ಮಾಣ, ಯುದ್ಧ ಹಡಗಳನ್ನು ನಿಲ್ಲಿಸಿ ರಿಪೇರಿ ಮಾಡಬಹುದಾದ ಪ್ರಾಂಗಣ, ನೌಕಾ ವಿಮಾನ ನಿಲ್ದಾಣ ಮುಂತಾದ ಸೌಕರ್ಯಗಳು ಸಿದ್ಧವಾಗುತ್ತಿವೆ. 2015 ರ ಹೊತ್ತಿಗೆ 2ಎ ನಿರ್ಮಾಣ ಮುಕ್ತಾಯವಾಗಲಿದೆ ಎಂದು ಯೋಜಿಸಲಾಗಿತ್ತು. ಆದರೆ, ಮುಕ್ತಾಯಕ್ಕೆ ಇನ್ನೂ ಕೆಲ ವರ್ಷ ಬೇಕಾಗಬಹುದು.
ಸದ್ಯ ಕಾರ್ಯನಿರ್ವಹಿಸುತ್ತಿರುವ ಯುದ್ಧ ಹಡಗು ರಿಪೇರಿ ಪ್ರಾಂಗಣ (ಎನ್‌ಎಎಸ್‌ಆರ್‌ವೈ) ನಲ್ಲಿ ಯುದ್ಧ ಹಡಗುಗಳನ್ನು ಮೇಲೆತ್ತಿ ರಿಪೇರಿ ಮಾಡುವ ಸೌಲಭ್ಯವಿದೆ. ಈಗ ನಿರ್ಮಾಣವಾಗುತ್ತಿರುವ ಹೊಸ ರಿಪೇರಿ ಪ್ರಾಂಗಣದಲ್ಲಿ ಹಡಗುಗಳು ನೀರಿನಲ್ಲಿ ತೇಲಿ ಬಂದು ನಿಂತ ನಂತರ ಪ್ರಾಂಗಣದ ನೀರು ಖಾಲಿ ಮಾಡುವ ವ್ಯವಸ್ಥೆ ಇದೆ.
ಇದನ್ನೂ ಓದಿ: ಬಸ್ಗೆ ಸಿಲುಕಿದ ಬೈಕನ್ನು 12 ಕಿಮೀ ಎಳೆದೊಯ್ದ ಚಾಲಕ
ಯುದ್ಧ ವಿಮಾನ ವಾಹಕ ನೌಕೆಗಳಿಗಾಗಿಯೇ ಎರಡು ಪ್ರತ್ಯೇಕ ಜಟ್ಟಿ ಇದ್ದು, ಅದರಲ್ಲಿ ಹಡಗುಗಳಿಗೆ ಬೇಕಾದ ನೀರು, ಇಂಧನ, ವಿದ್ಯುತ್, ಎಚ್‌ಪಿ, ಎಲ್‌ಪಿ ಗ್ಯಾಸ್ ಒದಗಿಸುವ ವ್ಯವಸ್ಥೆ. ಕೊಳೆ ನೀರು ಸಂಗ್ರಹಿಸುವ ವ್ಯವಸ್ಥೆಯೂ ಇರಲಿದೆ.
ಸೀಬರ್ಡ್ 2ಎ ನಿರ್ಮಾಣ ಕಾರ್ಯ ಮುಗಿಯುವ ಹೊತ್ತಿಗೆ ಇಲ್ಲಿ ಸುಮಾರು 30 ಯುದ್ಧ ಹಡಗುಗಳು ಕಾಯಂ ನೆಲೆ ಹೊಂದಲಿವೆ. 2ಬಿ ಮುಕ್ತಾಯದ ಹೊತ್ತಿಗೆ 50 ಹಡಗುಗಳು ಬಂದು ನಿಲ್ಲಲಿವೆ.
ಇಲ್ಲಿನ ಕದಂಬ ನೌಕಾನೆಲೆಯ ಯುದ್ಧ ಹಡಗು ರಿಪೇರಿ ಪ್ರಾಂಗಣವು ಕೊಚ್ಚಿ ಶಿಪ್‌ಯಾರ್ಡ್ ಜತೆಗೆ ಮೊದಲ ಬಾರಿಗೆ ಒಪ್ಪಂದ ಮಾಡಿಕೊಂಡಿದೆ.
ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ (ಆಧುನಿಕ ಯುದ್ಧ ಸಾಧನಗಳನ್ನು ಹೊಂದಿರುವ ವೇಗವಾಗಿ ಚಲಿಸಬಲ್ಲ ಯುದ್ಧ ನೌಕೆ)ಗಳ ಮರು ಜೋಡಣಾ ಕಾರ್ಯಕ್ಕೆ ಒಪ್ಪಂದ ಮಾಡಿಕೊಂಡಿದೆ. ಎನ್‌ಎಸ್‌ಆರ್‌ವೈನ ಮುಖ್ಯಸ್ಥ (ಅಡ್ಮಿರಲ್ ಸುಪರಿಂಟೆAಡೆAಟ್) ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಅವರು ಕೊಚ್ಚಿ ಶಿಪ್‌ಯಾರ್ಡ್ ಅಽಕಾರಿಗಳ ಜತೆ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಿದರು. ಇದು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ನೌಕಾ ಸೇನೆಯ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತೀಯ ನೌಕಾಸೇನೆಯು ಟ್ವೀಟ್ ಮೂಲಕ ತಿಳಿಸಿದೆ.