

ನವದೆಹಲಿ: ಮುಖ್ಯ ಉದ್ಯೋಗದ ಜೊತೆ ಇನ್ನೊಂದು ಅರೆಕಾಲಿಕ ಕೆಲಸ ಮಾಡುವ ‘ಮೂನ್ಲೈಟಿಂಗ್’ ಬಗ್ಗೆ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇಂತಹ ನೌಕರರನ್ನು ಉದ್ಯೋಗದಿಂದ ತೆಗೆಯುವುದಾಗಿ ಇನ್ಪೋಸಿಸ್ ಎಚ್ಚರಿಕೆ ನೀಡಿದೆ. ವಿಪ್ರೊ ಕೂಡ ಈ ರೀತಿಯ ಪ್ರವೃತ್ತಿ ವಂಚನೆ ಎಂದು ಹೇಳಿದ್ದು, ಅಜೀಂ ಪ್ರೇಮ್ ತಿಂಗಳ ಹಿಂದೆಯೇ ಅತೃಪ್ತಿ ಹೊರಹಾಕಿದ್ದರು.
ಇನ್ಪೋಸಿಸ್ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಸೋಮವಾರ ಉದ್ಯೋಗಿಗಳಿಗೆ ‘ನೋ ಟೂ ಟೈಮಿಂಗ್, ನೋ ಮೂನ್ಲೈಟಿಂಗ್’ ಒಕ್ಕಣೆಯ ಇಮೇಲ್ ಕಳುಹಿಸಿದ್ದು, ನೌಕರರ ನೀತಿ ಸಂಹಿತೆ ಪ್ರಕಾರ ಮೂನ್ಲೈಟಿಂಗ್ಗೆ ಅವಕಾಶವಿಲ್ಲ ಎಂದಿದೆ. ಅದನ್ನು ಉಲ್ಲಂಘಿಸಿದವರು ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಏನಿದು ಮೂನ್ಲೈಟಿಂಗ್?: ಮುಖ್ಯ ಉದ್ಯೋಗದ ಕೆಲಸದ ಸಮಯದ ನಂತರ ಅಥವಾ ಅದಕ್ಕೂ ಮೊದಲಿನ ಬಿಡುವಿನ ವೇಳೆಯಲ್ಲಿ ಬೇರೆ ಕೆಲವು ನಿರ್ದಿಷ್ಟ ಕೆಲಸ ಮಾಡುವುದನ್ನು ಮೂನ್ಲೈಟಿಂಗ್ ಎನ್ನುತ್ತಾರೆ.
ಕೋವಿಡ್ ಕಾಲದ ಪ್ರಕ್ರಿಯೆ: ಕೋವಿಡ್ ಸಾಂಕ್ರಾಮಿಕತೆ ಅವಧಿಯಲ್ಲಿ ನೌಕರರಿಗೆ ದೂರ ಪ್ರದೇಶದಿಂದ (ಮನೆಗಳಿಂದಲೇ) ಕೆಲಸ ಮಾಡುವ ಅವಕಾಶವನ್ನು ಕೊಟ್ಟ ವೇಳೆ ಮೂನ್ಲೈಟಿಂಗ್ ಸುತ್ತ ಕಳವಳ ಸೃಷ್ಟಿಯಾಗಿತ್ತು. ಈ ಸೌಲಭ್ಯವನ್ನು ಬಳಸಿಕೊಂಡ ನೌಕರರು ಏಕಕಾಲದಲ್ಲಿ ಬೇರೆ ಪ್ರಾಜೆಕ್ಟ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಚಾರ ಅನೇಕ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಐಟಿ ವಲಯದ ಸಂಸ್ಥೆಗಳಿಗೆ ತಿಳಿದು ಬಂದಿತ್ತು. ಇದು ಉತ್ಪಾದಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಂಘರ್ಷ ಸೃಷ್ಟಿಸುತ್ತದೆ. ಅಲ್ಲದೆ ಡೇಟಾ ಉಲ್ಲಂಘನೆಯೂ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದವು. ಬ್ಲ್ಯಾಕ್ಸ್ಟೋನ್ ನಿಯಂತ್ರಿತ ಸಂಸ್ಥೆ ಎಂಫಸಿಸ್ ಕಳೆದ ತಿಂಗಳು ಮೂನ್ಲೈಟಿಂಗ್ ವಿಚಾರದಲ್ಲಿ ತನ್ನ ಉದ್ಯೋಗಿಗಳ ಪರಿಶೀಲನೆಯನ್ನು ತೀವ್ರಗೊಳಿಸಿತ್ತು.