

ಸುನೀಲಕುಮಾರ್ ಧಾರೇಶ್ವರ್ ಹೇಳಿಕೆ -- ಯಕ್ಷಗಾನ ರಿಸರ್ಚ್ ಸೆಂಟರ್ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನವು ನೃತ್ಯ ಸಂಗೀತ, ಸಂಭಾಕ್ಷಣೆ ಒಳಗೊಂಡ ಕರ್ನಾಟಕದ ಜಾನಪದ ಹಾಗೂ ಶಾಸ್ತ್ರೀಯ ಕಲೆಯಾಗಿದ್ದು, ಇನ್ಫೋಸಿಸ್ ಸಂಸ್ಥೆಯೂ ಸಹ ಯಕ್ಷ ಲೋಕದಲ್ಲಿ ಪುಟ್ಟ ಹೆಜ್ಜೆ ಇಟ್ಟಿದೆ. ಇದು ಯಕ್ಷಗಾನ ಪ್ರಿಯರೊಂದಿಗೆ ನಮಗೂ ಸಂತಸ ವಿಚಾರವಾಗಿದೆ ಎಂದು ಇನ್ಫೋಸಿಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನೀಲಕುಮಾರ್ ಧಾರೇಶ್ವರ್ ಹೇಳಿದರು.
ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ಸಹಭಾಗಿತ್ವದಲ್ಲಿ ಭಾನುವಾರ ಸಂಜೆ ಇನ್ಫೋಸಿಸ್ ಫೌಂಡೇಷನ್ ನ ಯಕ್ಷಗಾನ ಡೆವೆಲೆಪ್ಮೆಂಟ್, ಟ್ರೇನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (ಐವೈಸಿ)ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಭರಾಟೆಯಲ್ಲಿ ಯಕ್ಷಗಾನ ಕಲೆಯೂ ಕಳೆಗುಂದುತ್ತಲಿದೆ. ಕಲಾವಿದರ ಕೊರತೆ ಎದುರಾಗಿದೆ. ಹೀಗಾಗಿ ಈ ಕಲೆಯನ್ನು ಉಳಿಸಲು ಮುಂದಾದ ಸಂಸ್ಥೆಯ ಸುಧಾಮೂರ್ತಿ ಹಾಗೂ ರಾಮದಾಸ್ ಕಾಮತ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.
ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ನಿರಂತರ ಪರಿಶ್ರಮ, ಪ್ರಯತ್ನದ ಫಲವಾಗಿ ಯಕ್ಷಗಾನ ಕಲೆ ಉಳಿಸುವ ಚಿಗುರೊಂದು ಉಡುಪಿಯಲ್ಲಿ ಮೊಳಕೆಯೊಡೆದಿದೆ. ಇದು ಕೇವಲ ಮನರಂಜನೆಯ ಕಲೆಯಲ್ಲ. ಭಾರತೀಯ ಧಾರ್ಮಿಕ ಸಂಸ್ಕೃತಿ, ಪುರಾಣ ಹಾಗೂ ದೇವಾನುದೇವತೆಗಳ ಕುರಿತಾಗಿ ತಿಳಿದುಕೊಳ್ಳುವ ಪ್ರಮುಖ ಮಾಧ್ಯಮ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಯುವಕರಿಗೆ ಸ್ಫೂರ್ತಿ ಬರಲಿ ಎಂದರು.
ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ಮಾತನಾಡಿ, ನಿಷ್ಕಾಮ ಕರ್ಮ ಮಾಡಿದರೆ ಭಗವಂತನ ವಿಶೇಷ ಒಲುವೆಯಿಂದ ಯೋಗ್ಯ ಫಲ ಲಭಿಸುತ್ತದೆ. ಯಕ್ಷಗಾನ ಕಲಾರಂಗ ಇನ್ನಿತರ ಕಲೆ ಬೆಳೆಸುವುದರೊಂದಿಗೆ ಬಡವರಿಗೆ, ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿಕೊಡುತ್ತದೆ. ಇಂತಹ ಶ್ರೇಷ್ಠ ಸಂಘಟನೆಗೆ ಹಾಗೂ ಯಕ್ಷಗಾನ ಕಲೆ ಉಳಿಸಲು ಇನ್ಫೋಸಿಸ್ ಸಂಸ್ಥೆ ಕೋಟ್ಯಂತರ ರೂ. ನೆರವು ನೀಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಮಾಹೆಯಿಂದ ಯಕ್ಷಗಾನ ಕಲಾರಂಗಕ್ಕೆ ಅಗತ್ಯವಿರುವ ಸಹಾಯ, ಸಹಕಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಮುಖ್ಯಸ್ಥ ಡಾ. ಜಿ.ಶಂಕರ್ ಶುಭ ಹಾರೈಸಿದರು.
ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನೀ. ಬಿ. ವಿಜಯ ಬಲ್ಲಾಳ್, ಬೆಂಗಳೂರಿನ ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು.
ತೆಂಕು ತಿಟ್ಟಿನ ಬಾಲಗೋಪಾಲ ನೃತ್ಯ ಹಾಗೂ ಬಡಗು ತಿಟ್ಟಿನ ಸ್ತ್ರೀ ನೃತ್ಯದ ಮೂಲಕ ಕಲಾವಿದರು ಯಕ್ಷಗಾನದ ಗಜಮುಖನಿಗೆ ವೇದಿಕೆಯಲ್ಲಿ ಪ್ರಥಮ ನರ್ತನ ಸೇವೆ ಸಲ್ಲಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ 'ವಸಂತೋತ್ಸವ' ಸಾಂಸತಿಕ ಕಾರ್ಯಕ್ರಮದಲ್ಲಿ ಒರಿಸ್ಸಾದ ಹಿಮ್ಮೇಳದೊಂದಿಗೆ ನೃತ್ಯಾಂತರ್ ಡ್ಯಾನ್ಸ್ ಬಳಗದಿಂದ 'ಕೃಷ್ಣಸ್ಯ ವರ್ಣಾನಿ' ಎಂಬ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯಿಂದ ಏನೂ ಮಾಡಲು ಅಸಾಧ್ಯ. ಆದರೆ, ಹತ್ತಾರು ಜನ ಸೇರಿದರೆ ಅಮೂಲ್ಯವಾದ ಕಾರ್ಯ ಘಟಿಸುತ್ತದೆ. ಇದಕ್ಕೆ ಈ ಯಕ್ಷಗಾನ ಭವನ ಸಾಕ್ಷಿ. ಮನುಷ್ಯ ದಿನ ಕಳೆದಂತೆ ಸಾವಿಗೆ ಹತ್ತಿರವಾಗುತ್ತಾನೆ. ಆದರೆ, ಜೀವನದಲ್ಲಿ ಮಹತ್ಕಾರ್ಯಕ್ಕೆ ಕೈಜೋಡಿಸಿದರೆ ಮರಣದ ನಂತರವೂ ಆತನ ಹೆಸರು ಅಮರವಾಗಿರುತ್ತದೆ. ಅನೇಕರ ಸಹಕಾರದಲ್ಲಿ ಮೈದಳೆದ ಯಕ್ಷಗಾನ ಕಲಾರಂಗದ ಈ ಭವನ ದೇಶಕ್ಕೆ ಕಿರೀಟಪ್ರಾಯವಾಗಲಿ ಎಂದು ಆಶಿಸಿದರು.