

ಬೆಂಗಳೂರು: ವಾರದ ರಜಾ ದಿನದ ಬೆಳಗ್ಗೆಯೇ 'ಜಗನ್ನಾಥ ಭವನ'ದ ಮುಂದೆ ಉತ್ಸಾಹದಿಂದ ನೆರೆದ ಕಲಾ ತಂಡಗಳು, ಕಲಾವಿದರ ಹಾಗೂ ಕಾರ್ಯಕರ್ತರ ಲವಲವಿಕೆಯ ಓಡಾಟ ನೋಡಿದವರ ಕಣ್ಣುಗಳು ಕುತೂಹಲದಿಂದ ಅರಳಿದವು, ಕಲಾ ತಂಡಗಳ ನಾದ, ಕುಣಿತಕ್ಕೆ ಮೈಮನ ಮರೆತು ಬೆರೆತವು.
ರಾಜ್ಯ ಬಿಜೆಪಿ ಕಚೇರಿ ಮುಂದೆ ಭಾನುವಾರ ಬೆಳಗ್ಗೆ ಕಂಡು ಬಂದ ದೃಶ್ಯವಿದು. ಸಮೀಪದ ಕಾಡು ಮಲ್ಲೇಶ್ವರ ದೇವಸ್ಥಾನದ ಜಾತ್ರೋತ್ಸವ ವೈಭವ, ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ, ಜಯಘೋಷ ಕಂಡುಂಡವರಿಗೆ ವಿಶಿಷ್ಟ ಅನುಭವ ನೀಡಿತ್ತು.
ಹಾಗೆ ನೋಡಿದರೆ ಪಕ್ಷದ ಕಚೇರಿಯಿಂದ ಇಂತಹದೊಂದು ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಇದೇ ಮೊದಲೇನಲ್ಲ. 'ಜಗನ್ನಾಥ ಬಳಗ' ಹಾಗೂ ಪಕ್ಷದ ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ ಜಂಟಿಯಾಗಿ ಪ್ರತಿ ತಿಂಗಳು 'ಮಾಸದ ಮಾಧುರ್ಯ' ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈ ಬಾರಿಯದು ಶತಕದ ಕಾರ್ಯಕ್ರಮವಾದ ಕಾರಣ 'ಮಾಸದ ಮಾಧುರ್ಯ ನೂರರ ಸಂಂಭ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗಿದ್ದು, ನವರಾತ್ರಿ ಉತ್ಸವದ ಕಳೆಗಟ್ಟಿತ್ತು.
ಅಲಂಕೃತ ರಥ ಸಾಗುತ್ತಿದ್ದಂತೆ ಡೊಳ್ಳು, ತಮಟೆ, ಪೂಜಾ ಕುಣಿತ, ಗೊಂಬೆಗಳ ಕುಣಿತ ಸೇರಿ ವಿವಿಧ ಕಲಾ ತಂಡಗಳು ತಮ್ಮ ಕಲಾ ಸಿರಿವಂತಿಕೆಯನ್ನು ರಸ್ತೆ ಆಸುಪಾಸು ನೆರೆದ ಜನರಿಗೆ ಉಣಬಡಿಸಿದರು. ಪಕ್ಷದ ರಾಜ್ಯ ಕಚೇರಿಯಿಂದ ಹೊರಟ ಶೋಭಾಯಾತ್ರೆ ಮುಖ್ಯ ರಸ್ತೆಯಲ್ಲಿ ಸಾಗಿ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣ ದೇವರಾಯ ಸಭಾಂಗಣಕ್ಕೆ ತಲುಪಿತು.
ಇದಕ್ಕೂ ಮುನ್ನ ಶೋಭಾಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧ ಮೋಹನದಾಸ್ ಅಗರ್ವಾಲ್ ಮಾತನಾಡಿ ರಾಜಕೀಯ ಪಕ್ಷದ ಕಚೇರಿಗೆ ಹೊಸತನದ ಸ್ಪರ್ಶ. ಇಂತಹ ಕಾರ್ಯಚಟುವಟಿಕೆಯನ್ನು ಎಲ್ಲೂ ನೋಡಿಲ್ಲ. ಬೇರೆ ರಾಜ್ಯಗಳಿಗೆ ಹೋದಾಗ ಈ ಬಗ್ಗೆ ತಿಳಿಸಿ ಪ್ರೋತ್ಸಾಹ ನೀಡಬೇಕೆನಿಸುತ್ತದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೋಭಾಯಾತ್ರೆಗೆ ಚಾಲನೆ ನೀಡಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಪಕ್ಷದ ಕಚೇರಿ ಕಾರ್ಯಕರ್ತರಿಗೆ ಸೀಮಿತವಾಗಬಾರದು. ಸಾಮಾನ್ಯ ಜನರು ಬಂದು ಹೋಗಬೇಕೆಂಬ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರ ಆಶಯದಂತೆ ಮಾಸದ ಮಾಧುರ್ಯ ಏರ್ಪಡಿಸುತ್ತಾ ಬಂದಿದ್ದು, ನೂರರ ಸಂಭ್ರಮ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಚಿತ್ರನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ ಜಾತಿಗಳು ಆಳವಾಗಿ ಬೇರು ಬಿಟ್ಟಿದೆ. ಪ್ರಾಣಿ, ಪಕ್ಷಿ ಸಂಕುಲದಲ್ಲಿ ಜಾತಿಗಳಿವೆ. ಆದರೆ ಕಲೆ ಮಾತ್ರ ಜಾತಿಗೆ ಅತೀತವಾದದ್ದು. ಅದಕ್ಕಾಗಿ ಕಲೆಯ ಬಗ್ಗೆ ಎಲ್ಲರಿಗೂ ಗೌರವ, ಪ್ರೀತಿ, ಅಭಿಮಾನ ಜಾಸ್ತಿ ಎಂದರು.
ಅಧ್ಯಕ್ಷತೆವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪಕ್ಷದ ಕಚೇರಿಯಲ್ಲಿ ಏರ್ಪಡಿಸಿ ಉತ್ತೇಜಿಸಬೇಕು. ಈ ಕಾರಣದಿಂದ ಸಾಮಾನ್ಯ ಜನರು ಪಕ್ಷದ ಕಚೇರಿಗೆ ಬಂದು ಹೋಗಬೇಕು ಎಂಬ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರ ಆಶಯದಂತೆ ಪ್ರತಿ ತಿಂಗಳು ಏರ್ಪಡಿಸುತ್ತಾ ಬಂದಿದ್ದು, ನೂರರ ಸಡಗರದಲ್ಲಿರುವುದು ಖುಷಿ, ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಶಂಸಿಸಿದರು.
ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.