ಕರ್ನಾಟಕಕ್ಕೆ 'ನಿರ್ಮಲ' ಅನ್ಯಾಯ; ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

Lead 18 March 20
Published on

ಬೆಂಗಳೂರು: ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ, ಬರೋಬ್ಬರಿ 5495 ಕೋಟಿ ರೂ. ವಿಶೇಷ ಅನುದಾನ ಬಾರದಂತೆ ತಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆ ಸಹಿತ ಆರೋಪ ಮಾಡಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ, 15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ತೆಲಂಗಾಣ, ಮಿಜೋರಾಂ ಮತ್ತು ಕರ್ನಾಟಕಕ್ಕೆ ಒಟ್ಟು 6764 ಕೋಟಿ ರೂ. ವಿಶೇಷ ಅನುದಾನ ನೀಡಲು ಸೂಚಿಸಿತ್ತು. ಅದರೆ, ನಿರ್ಮಲಾ ಸೀತಾರಾಮನ್ ಅವರೇ ಕರ್ನಾಟಕಕ್ಕೆ ಹಣ ನೀಡದಂತೆ ತಡೆದಿದ್ದಾರೆ. ಅವರೇ ಸಹಿ ಮಾಡಿದ್ದಾರೆ ನೋಡಿ ಎಂದು ದಾಖಲೆ ಪ್ರದರ್ಶಿಸಿದರು. ಈ ವಿಷಯ ನನ್ನ ಗಮನಕ್ಕೂ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಳಿತಲ್ಲಿಂದಲೇ ಮುಖವಾಡಿಸಿದರು. ಇಷ್ಟೊಂದು ಹಣ ಕಡಿತವಾಗಿರುವುದು ರಾಜ್ಯದ ದುರ್ದೈವ ಹೌದೋ ಅಲ್ಲವೋ ಹೇಳಿ ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದಾಗ, ಆಡಳಿತ ಪಕ್ಷ ಮೌನಕ್ಕೆ ಜಾರಿತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗ ಮಾಡಿಬಿಡುತ್ತೇವೆ ಎಂದಿರಲ್ಲ, ಇದೇನು ಪರಿಸ್ಥಿತಿ ಅರಿವಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 25 ಸಂಸದರನ್ನು ಜನ ಆರಿಸಿದ್ದಾರೆ, ಉಪಚುನಾವಣೆಯಲ್ಲಿ 15ರಲ್ಲಿ 12 ಮಂದಿ ಗೆಲ್ಲಿಸಿದ್ದಾರೆ. ಜನ ನಮ್ಮ ಪರವಾಗಿದ್ದಾರೆಂದು ಯಡಿಯೂರಪ್ಪ ಹೇಳುತ್ತಾರೆ. ಅವರಿಗೇ ಏನು ಮಾಡುತ್ತೀರಿ ಎಂದು ಈಗ ಹೇಳಿ ಎಂದರು.

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಮಿಜೋರಾಂಗೆ 546 ಕೋಟಿ ರೂ., ತೆಲಂಗಾಣಕ್ಕೆ 723 ಕೋಟಿ ರೂ. ಮತ್ತು ಕರ್ನಾಟಕಕ್ಕೆ 5495 ಕೋಟಿ ರೂ. ಎಂದು ನಿಗದಿಯಾಗಿತ್ತು. ಈ ಸಂದರ್ಭ ಇಷ್ಟು ಹಣ ಸಿಕ್ಕಿದ್ದಿದ್ದರೆ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುತ್ತಿರಲಿಲ್ಲವೇ, ನೀರಾವರಿ ಯೋಜನೆಗೆ ಕೊಡಬಹುದಿತ್ತಲ್ಲವೇ? 25 ಸಂಸದರು ಮತ್ತು ನೀವು ಹೋಗಿ ಹಣಕಾಸು ಸಚಿವರನ್ನು ಕೇಳಿ. ನೀವು ಮಾಡಿದ್ದು ಸರಿಯಲ್ಲವೆಂದು ಹೇಳಿ. ನಿಮಗೆ ಹೆದರಿಕೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಿಮ್ಮೊಂದಿಗೆ ನಾವೂ ಬರುತ್ತೇವೆ, ನಾನೇ ಕೇಳುತ್ತೇನೆ, ಹೀಗೆ ಬಿಟ್ಟರೆ ರಾಜ್ಯದ ಜನರಿಗೆ ಅನ್ಯಾಯವಾಗುತ್ತದೆ. ಪತ್ರ ಬರೆಯುವುದರಿಂದ ಏನೂ ಆಗಲ್ಲ ಎಂದರು.

ಆರ್ಥಿಕ ಆಘಾತದ ಎಚ್ಚರಿಕೆ

ರಾಜ್ಯ ಸರ್ಕಾರದ ನಿಗದಿತ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ, ಕೇಂದ್ರದಿಂದ ಬರುವ ಪಾಲು ಕಡಿತ ವಾಗುತ್ತಿದೆ. ಹೀಗೆ ಆದರೆ, 2021-22ರ ಬಳಿಕ ಸರ್ಕಾರ ಕೇವಲ ನೌಕರರಿಗೆ ಸಂಬಳ, ಪಿಂಚಣಿ, ಸಾಲದ ಮೇಲಿನ ಬಡ್ಡಿ ಪಾವತಿ ಮಾಡಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾದ್ರೆ ಅಭಿವೃದ್ಧಿ ಹೇಗೆ ಸಾಧ್ಯ?

ಕೇಂದ್ರದಿಂದ 8887 ಕೊಟಿ ರೂ. ಕಡಿಮೆ ಪಾಲು ಬಂದಿದೆ. ಜಿಎಸ್​ಟಿ ಪರಿಹಾರ 3000 ಕೋಟಿ ರೂ. ಕಡಿಮೆಯಾಗಿದೆ. ಒಟ್ಟಾರೆ 11,887 ಕೋಟಿ ರೂ. ಪಾಲು ಕಮ್ಮಿಯಾಗಿದೆ. ರಾಜ್ಯದ ಪಾಲಿನ ತೆರಿಗೆ ಸಂಗ್ರಹ 4-5 ಸಾವಿರ ಕೋಟಿ ರೂ. ಇಳಿಕೆಯಾಗಿದೆ. 2018-19ರ ಬಜೆಟ್ ಪರಿಷ್ಕರಿಸಿದ ಬಳಿಕ ಇದೇ ವೇಳೆ ಈ ಸಾಲಿನ ಬಜೆಟ್ 2,26,605 ಕೋಟಿ ರೂ.ಗೆ ನಿಗದಿಯಾಗಿದೆ. ಅಂದರೆ ಸರಿಸುಮಾರು 16 ಸಾವಿರ ಕೋಟಿ ಕಡಿಮೆ. ಹೀಗಾದರೆ ಅಭಿವೃದ್ಧಿ ಕೆಲಸ ಹೇಗೆ ಸಾಧ್ಯ? ಈ ಸರ್ಕಾರಕ್ಕೆ ದಾರಿದ್ರ್ಯ ಬಂದಿದೆ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನೂ 13 ಬಜೆಟ್ ಮಂಡಿಸಿದ್ದೇನೆ, ಈ ರೀತಿ ಆದಾಯ ಕೊರತೆಯಾದ ಸಂದರ್ಭ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಿ, ಖರ್ಚು ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಅದರಿಂದ ಪರಿಣಾಮಕಾರಿ ಬದಲಾವಣೆ ಆಗಲ್ಲ ಎಂದು ಅಭಿಪ್ರಾಯಪಟ್ಟರು.

ವಿಧೇಯಕ ಮಂಡಿಸಿದ್ದು ಸರ್ಕಾರ ಮನವರಿಕೆ ಮಾಡಿದ್ದು ಪ್ರತಿಪಕ್ಷ

ಸಾಮಾನ್ಯವಾಗಿ ವಿಧೇಯಕಗಳನ್ನು ಮಂಡಿಸುವ ಸರ್ಕಾರ, ಅದನ್ನು ಒಪ್ಪಿಗೆ ಪಡೆದುಕೊಳ್ಳುವ ಉದ್ದೇಶದಿಂದ ಶಾಸಕರಿಗೆ ಮನವರಿಕೆ ಮಾಡಕೊಡುತ್ತದೆ. ಈ ಪರಿಪಾಠಕ್ಕೆ ವ್ಯತಿರಿಕ್ತ ಎಂಬಂತೆ ಸಚಿವರು ವಿಧೇಯಕ ಮಂಡಿಸಿದರೆ, ಪ್ರತಿಪಕ್ಷ ಸದಸ್ಯರಿಬ್ಬರು ಸದನಕ್ಕೆ ಮನವರಿಕೆ ಮಾಡಿಕೊಟ್ಟರು. ಡಿಸಿಎಂ ಅಶ್ವತ್ಥನಾರಾಯಣ ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ವಿಧೇಯಕ ಮಂಡನೆ ಬಳಿಕ ಪರ್ಯಾಲೋಚನೆಗೆ ಮುಂದಾದರು. ಆದರೆ, ವಿಧೇಯಕದ ಉದ್ದೇಶವನ್ನು ಸದಸ್ಯರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಲಿಲ್ಲ. ರಮೇಶ್​ಕುಮಾರ್ ಹಾಗೂ ದಿನೇಶ್ ಗುಂಡೂರಾವ್, ನಾವು ವಿಧೇಯಕಕ್ಕೆ ಬೆಂಬಲ ನೀಡುತ್ತೇವೆ, ಅದರೆ ಸ್ಪಷ್ಟತೆ ನೀಡಿ ಎಂದು ಕೇಳಿಕೊಂಡರು. ಮತ್ತೆ ಮತ್ತೆ ಡಿಸಿಎಂ ಉದಾಹರಣೆ ನೀಡಿ ವಿವರಣೆ ನೀಡಿದರೂ ಸ್ಪಷ್ಟತೆ ಸಾಧ್ಯವಾಗಲಿಲ್ಲ. ಕೊನೆಗೆ ಡಿ.ಕೆ.ಶಿವಕುಮಾರ್ ಹಾಗೂ ಕೃಷ್ಣಬೈರೇಗೌಡ ವಿಧೇಯಕದ ಉದ್ದೇಶವನ್ನು ಉದಾಹರಣೆ ಸಹಿತ ವಿವರಿಸಿದರು.

ಮುಖ್ಯಾಂಶ: ಸ್ಟಾರ್ಟ್​ಅಪ್ ಅಥವಾ ಕಂಪನಿಗಳು ಹೊಸ ತಂತ್ರಜ್ಞಾನ ಬಳಕೆಗೆ ಎದುರಿಸುವ ಕಾನೂನಾತ್ಮಕ ತೊಡಕು ನಿವಾರಿಸಲು ಸಿಎಂ ನೇತೃತ್ವದ ನಾವಿನ್ಯತಾ ಪ್ರಾಧಿಕಾರ ರಚನೆಗೆ ಶಾಸನಸಭೆ ಅನುಮೋದನೆ ನೀಡಿದೆ. ಹೊಸ ಆಲೋಚನಾ ಕ್ರಮಗಳ ಉತ್ಪನ್ನ ಬಳಕೆಗೆ ಇಲಾಖೆಗಳಲ್ಲಿ ಅನುಮತಿ ಸಿಗದಾಗ, ಚಲಾವಣೆಯಲ್ಲಿರುವ ಕಾನೂನಿನಲ್ಲೂ ಅವಕಾಶ ಇಲ್ಲದಾಗ ಈ ಸಮಿತಿ ಪರಿಶೀಲಿಸಿ ಅವಕಾಶ ಮಾಡಿಕೊಡುತ್ತದೆ. ಕಾನೂನು ತಿದ್ದುಪಡಿಗೂ ಇಲಾಖೆಗಳಿಗೆ ಶಿಫಾರಸು ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net