ಗಾಯಗೊಂಡಿದ್ದ ಅಂಗನವಾಡಿ ಮಕ್ಕಳು ಚೇತರಿಕೆ

12 SARAG 2
ಸರಗೂರು ತಾಲೂಕಿನ ತೆಲುಗಮಸಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡದ ಛಾವಣಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಾಪಂ ಇಒ ಕೆ.ಸುಷ್ಮಾ, ಸಿಡಿಪಿಒ ಆಶಾ, ಜಿಪಂ ಇಂಜಿನಿಯರ್ ಲಿಂಗರಾಜು ಇದ್ದರು.
Published on

ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಲುಗು ಮಸಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಛಾವಣಿಯ ಸಿಮೆಂಟ್ ಚಕ್ಕೆಗಳು ಉದುರಿ ಗಂಭೀರ ಗಾಯಗೊಂಡಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಬಿಸಿಯೂಟ ಮುಗಿಸಿ ಮಕ್ಕಳು ಕೊಠಡಿಯಲ್ಲಿ ಮಲಗಿದ್ದ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಛಾವಣಿಯ ಸಿಮೆಂಟ್ ಚಕ್ಕೆಗಳು ಕುಸಿದ ಪರಿಣಾಮ ಪುಟಾಣಿಗಳಾದ ನಿಶಾಂತ್ ಮತ್ತು ಪೂರ್ಣಿಮಾ ತಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅಪಾಯದಿಂದ ಪಾರಾಗಿದ್ದರು.

ಪರಿಶೀಲನೆ: ಈ ಅಂಗನವಾಡಿ ಕೇಂದ್ರಕ್ಕೆ ಇತ್ತೀಚೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಸಿಡಿಪಿಒ ಆಶಾ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಲಿಂಗರಾಜು ಭೇಟಿ ನೀಡಿ ಛಾವಣಿಯನ್ನು ಪರಿಶೀಲನೆ ನಡೆಸಿದರು.

ಶಾಸಕ ಅನಿಲ್ ಚಿಕ್ಕಮಾದು ಅವರ ನಿರ್ದೇಶನದ ಮೇರೆಗೆ ಅಂಗನವಾಡಿ ಕೇಂದ್ರದ ದುರಸ್ತಿಗೆ ಕ್ರಮ ವಹಿಸಲಾಗಿದೆ. ದುರಸ್ತಿ ಆಗುವವರೆಗೆ ಗ್ರಾಮದ ಖಾಲಿ ಇರುವ ಶಾಲಾ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಸ್ಥಳಾಂತರಿಸುವಂತೆ ಅಂಗನವಾಡಿ ಕಾರ್ಯಕರ್ತೆ ಮಲ್ಲಿಗಮ್ಮ ಅವರಿಗೆ ಸೂಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net