

ಬೆಂಗಳೂರು: ಸಂಚಾರ ಸಮಸ್ಯೆಯ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್ ಆರಂಭಿಸಲಾಗಿದ್ದು, ೮೦ ವಾಹನಗಳಿಗೆ ದಂಡ ವಿಧಿಸಲಾಗಿದೆ.
ಮೆಜೆಸ್ಟಿಕ್ ಮತ್ತು ಗಾಂಧಿನಗರ ಸುತ್ತಮುತ್ತ ಹೋಟೆಲ್‌ಗಳು, ವಕೀಲರ ಕಚೇರಿಗಳು, ಬಟ್ಟೆ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಶಾಪಿಂಗ್‌ಗೆ, ಆಹಾರ ಸೇವನೆಗೆ ಹಾಗೂ ಕಾನೂನು ಕೆಲಸಕ್ಕಾಗಿ ಈ ಭಾಗಕ್ಕೆ ಬರುವ ವಾಹನ ಸವಾರರು ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿ ಹೆಚ್ಚಿದೆ. ಇದರಿಂದ ವಾಹನ ಸಂಚಾರ ಸಮಸ್ಯೆಯಾಗುತ್ತಿದೆ. ಮತ್ತೊಂದೆಡೆ ಸ್ವಾತಂತ್ರ್ಯ ಉದ್ಯಾನದ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲೂ ವಾಹನ ನಿಲುಗಡೆಗೆ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಮೆಜೆಸ್ಟಿಕ್ ಭಾಗದಲ್ಲಿ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಸಂಚಾರ ಪೊಲೀಸರು ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿನ ವಾಹನಗಳ ಟೋಯಿಂಗ್ ಆರಂಭಿಸಿದ್ದಾರೆ. ಭಾನುವಾರ ಒಂದೇ ದಿನ ಸುಮಾರು ೮೦ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಿದ್ದಾರೆ.
ವಿಶೇಷ ಆದ್ಯತೆ ಮೇರೆಗೆ ಉಪ್ಪಾರಪೇಟೆ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್ ಆರಂಭಿಸಲಾಗಿದೆ. ವಾಹನಗಳ ಟೋಯಿಂಗ್‌ಗೆ ಪ್ರತ್ಯೇಕ ಶುಲ್ಕ ಪಡೆಯುತ್ತಿಲ್ಲ. ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಸಂಚಾರ ನಿಯಮ ಉಲ್ಲಂಸಿದ್ದಕ್ಕೆ ಮಾತ್ರ ಸವಾರರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.