

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕಳ್ಳತನ ಮಾಡಿದ್ದಾನೆ ಅಂತ ಒಂದು ವಾರಗಳು ಕಾಲ ವ್ಯಕ್ತಿಯೊಬ್ಬನನ್ನು ರೂಮಲ್ಲಿ ಕೂಡಿಟ್ಟು ಗುಂಪೊಂದು ಹಲ್ಲೆ ಮಾಡಿದೆ. ಕೊನೆಗೆ ಕಿರುಕುಳ ಸಹಿಸದೇ ಆ ವ್ಯಕ್ತಿ ರೂಮಿನಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಅಮಾನವೀಯ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸೈಪುಲ್ಲಾ (35) ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಕಿರುಕುಳ ಸಹಿಸದೆ ಸಾವು
ರಾಮಮೂರ್ತಿ ನಗರದ ಗೋಡಾನ್ನಲ್ಲಿ ಕಳ್ಳತನ ಮಾಡಿದ ಆರೋಪ ಸೈಪುಲ್ಲಾ ಮೇಲಿತ್ತು. ಈ ಹಿನ್ನೆಲೆಯಲ್ಲಿ ಕೆಜಿ ಹಳ್ಳಿಯ ವೆಂಕಟೇಶಪುರಂ ರೂಂನಲ್ಲಿ ಆತನನ್ನು ಒಂದು ವಾರಗಳ ಕಾಲ ಕೂಡಿಟ್ಟು ಹಲ್ಲೆ ಮಾಡಿದ್ದಾರೆ. ಒಂದು ವಾರಗಳ ಕಾಲ ನೋವಿನಿಂದ ನರಳಾಡಿದ ಸೈಫುಲ್ಲಾ ಕೊನೆಗೆ ಕಿರುಕುಳ ಸಹಿಸದೇ ಕೊನೆಯುಸಿರೆಳೆದನು.
ಒಂದೇ ಸಮಯದಲ್ಲಿ 2 ದೂರು
ಸೈಪುಲ್ಲಾ ಮೃತಪಟ್ಟ ಬಳಿಕ ಆತನ ಶವವನ್ನು ಸಾದಹಳ್ಳಿ ಬ್ರಿಡ್ಜ್ ಮೋರಿಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಶವ ಎಸೆದು ತಾವೇ ದೂರು ನೀಡಲು ಆರೋಪಿಗಳು ಮುಂದಾಗಿದ್ದರು. ಆರೋಪಿ ಜಬೀ ಎಂಬಾತ ಸೈಪುಲ್ಲಾ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದ. ಇನ್ನೊಂದೆಡೆ ಅದೇ ಸಮಯದಲ್ಲಿ ಸೈಫುಲ್ಲಾ ತಾಯಿ ಸಹ ನಾಪತ್ತೆ ದೂರು ದಾಖಲಿಸಿದರು.
ಅಸಲಿ ಸತ್ಯ ಬಯಲು
ಈ ವೇಳೆ ಎರಡು ದೂರುಗಳು ಒಂದೇ ಕೇಸ್ಗೆ ಸಂಬಂಧಿಸಿದ್ದು ಎಂಬುದು ಪೊಲೀಸರಿಗೆ ಪತ್ತೆಯಾಯಿತು. ಬಳಿಕ ರಾಮಮೂರ್ತಿನಗರ ಪೊಲೀಸರು ಜಬೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಹಲ್ಲೆ ವಿಡಿಯೋಗಳು ಬೆಳಕಿಗೆ ಬಂದಿವೆ.
ಇದೀಗ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಶಾಂತ್, ಶೇಖ್ ಜಬೀವುಲ್ಲಾ ಹಾಗೂ ಶಾಬಾಜ್ ಅಲಿಯಾಸ್ ಬಬನ್ ಬಂಧಿತರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)