

ಸಕಲೇಶಪುರ: ಮುಜರಾಯಿ ಇಲಾಖೆಯ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಗ್ರಾಮ ಪಂಚಾಯಿತಿ ಮೂಲಕ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಶ್ರುತಿ ಹೇಳಿದರು.
ತಾಲೂಕಿನ ಹಾನುಬಾಳ್ ಹೋಬಳಿ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ದೇವಾಲದಕೆರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾ.ಪಂ. ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಗ್ರಾಮಸ್ಥರು, ದೇವಸ್ಥಾನದ ಮೂಲಸೌಕರ್ಯಗಳ ಕೊರತೆ ಕುರಿತು ನನ್ನ ಗಮನಕ್ಕೆ ಬಂದಿದೆ. ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಕುಡಿಯುವ ನೀರು ಹಾಗೂ ದೇವಸ್ಥಾನಕ್ಕೆ ವಿದ್ಯುತ್ ಕಲ್ಪಿಸುವ ವ್ಯವಸ್ಥೆಯನ್ನು ಕೂಡಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದಲ್ಲಿ ಪೊಲೀಸ್ ಅಥವಾ ಹೋಮ್ ಗಾರ್ಡ್ ವ್ಯವಸ್ಥೆಯನ್ನು ಕೂಡಲೇ ಮಾಡಲಾಗುವುದು. ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಪಾದರಕ್ಷೆಗಳನ್ನು ಬಿಡುವ ಸ್ಥಳ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈಗಾಗಲೇ ಸೂಚಿಸಲಾಗಿದೆ. ದೇವಾಲಯದ ಬಾಗಿಲುಗಳ ಅಭಿವೃದ್ಧಿ ಹಾಗೂ ಕಿಟಕಿಗಳ ದುರಸ್ತಿ, ಗೇಟುಗಳ ಅಳವಡಿಕೆ, ಸೇವಾರ್ಥಗಳಿಗೆ ಸಮಯ ನಿಗದಿಗೊಳಿಸುವುದು ಎಂದರು.
ದೇವಸ್ಥಾನದ ಆಡಳಿತ ಮಂಡಳಿಯನ್ನು ರಚಿಸಿ ಅವರೊಂದಿಗೆ ತಹಸೀಲ್ದಾರ್ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಹಂತ, ಹಂತವಾಗಿ ಭಕ್ತರ ಧಾರ್ಮಿಕ ಭಾವನೆಗಳಿಗೆ ತೊಂದರೆ ಆಗದಂತೆ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಗ್ರಾಮಸ್ಥರು ಮಾತನಾಡಿ, ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಸ್ವಚ್ಛತೆ ಹಾಗೂ ಪಾವಿತ್ರೃತೆಗೆ ಒತ್ತು ಕೊಡದೆ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ದೇವಸ್ಥಾನದ ಒಳಗೆ ಪೂಜೆ ನಡೆಯುತ್ತಿದ್ದರೂ ಪಾದರಕ್ಷೆಗಳನ್ನು ಹಾಕಿಕೊಂಡು ದೇವಸ್ಥಾನದ ಆವರಣದಲ್ಲಿ ನಿಂತು ಭಕ್ತಾದಿಗಳಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಅಲ್ಲದೆ ಹೆಚ್ಚು ಭಕ್ತಾದಿಗಳು ದೇವಸ್ಥಾನದ ಕಟ್ಟಡದ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಕಟ್ಟಡದ ಕಲ್ಲುಗಳು ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪುತ್ತಿವೆ ಎಂದು ಸಮಸ್ಯೆಯನ್ನು ಮನವರಿಕೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು, ತಾಲೂಕು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಮಂಜುನಾಥ್ ಸಂಗಿ, ಪೃಥ್ವಿ ಅವರೇಕಾಡು ಇತರರು ಇದ್ದರು.