

Infosys: ಐಟಿ ಲೋಕದಲ್ಲಿ ದೈತ್ಯ ಸಂಸ್ಥೆಯಾಗಿರುವ ನಾರಾಯಣ ಮೂರ್ತಿ ಅವರ ಮೈಸೂರಿನ ಇನ್ಫೋಸಿಸ್, ತನ್ನ ಕ್ಯಾಂಪಸ್‌ನಿಂದ ಬರೋಬ್ಬರಿ 700 ಹೊಸ ಉದ್ಯೋಗಿಗಳನ್ನು ಇದೀಗ ಕೆಲಸದಿಂದ ಕಿತ್ತುಬಿಸಾಡಿದೆ. ಈ ಕುರಿತಂತೆ ಐಟಿ ಉದ್ಯೋಗಿಗಳ ಒಕ್ಕೂಟವಾದ ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಶುಕ್ರವಾರ (ಫೆ.07) ಮಾಹಿತಿ ಹಂಚಿಕೊಂಡಿದೆ.
ಇತ್ತೀಚೆಗಷ್ಟೇ ತನ್ನೆಲ್ಲಾ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಮಾಡಿದ್ದ ಇನ್ಫೋಸಿಸ್, ಫ್ರೆಶೆರ್ಸ್ ಸೇರ್ಪಡೆಯಾದ ಕೆಲವೇ ತಿಂಗಳುಗಳ ನಂತರ ಅವರನ್ನು ಇದೀಗ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಒಕ್ಕೂಟ ಹೇಳಿಕೊಂಡಿದೆ. ವಜಾಗೊಳಿಸಿದ ಉದ್ಯೋಗಿಗಳನ್ನು ಗೌಪ್ಯತಾ ಒಪ್ಪಂದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ಇದು ವಜಾಗೊಳಿಸುವ ವಿವರಗಳನ್ನು ನಿಗ್ರಹಿಸುವ ಪ್ರಯತ್ನವಾಗಿರಬಹುದು ಎಂದು NITES ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಕೆಲವು ತಿಂಗಳ ಹಿಂದೆಯಷ್ಟೇ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ನೇಮಕಗೊಂಡಿದ್ದ ಸುಮಾರು 700 ಹೊಸ ಉದ್ಯೋಗಿಗಳನ್ನು ಇನ್ಫೋಸಿಸ್ ಈಗ ಕೆಲಸದಿಂದ ತೆಗೆದುಹಾಕಿದೆ" ಎಂದು NITES ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿ ಕಂಪನಿಯು ಅವರನ್ನು ಬೆದರಿಸಿತು. ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿತು. ಈ ವೇಳೆ ಉದ್ಯೋಗಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಲು ಮತ್ತು ಘಟನೆಯನ್ನು ಚಿತ್ರೀಕರಿಸಲು ಅಥವಾ ಸಹಾಯ ಪಡೆಯಲು ಯಾವುದೇ ಮಾರ್ಗವಿಲ್ಲದೆ ಅಸಹಾಯಕರಾದರು" ಎಂದು ಸಿಂಗ್ ಸಲೂಜಾ ಆರೋಪಿಸಿದ್ದಾರೆ.
ಇನ್ನು ಸಂಸ್ಥೆ ವಿರುದ್ಧ ಕೇಳಿಬಂದ ಆರೋಪಗಳಿಗೆ ಕಡೆಗೂ ಪ್ರತಿಕ್ರಿಯಿಸಿದ ಇನ್ಫೋಸಿಸ್, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. "ವಜಾಗೊಳಿಸಿದ ಹೊಸಬರು ಆನ್‌ಬೋರ್ಡಿಂಗ್ ಪ್ರಕ್ರಿಯೆಯ ಭಾಗವಾಗಿರುವ ಬಹು ಆಂತರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ" ಎಂದು ಹೇಳಿದೆ. "ಎಲ್ಲಾ ಹೊಸಬರು ಮೌಲ್ಯಮಾಪನದಲ್ಲಿ ಉತ್ತೀರ್ಣರಾಗಲು ಮೂರು ಪ್ರಯತ್ನಗಳನ್ನು ಪಡೆಯುತ್ತಾರೆ, ವಿಫಲವಾದರೆ ಅವರು ಸಂಸ್ಥೆಯಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಈ ವಿಷಯವನ್ನು ಅಗ್ರಿಮೆಂಟ್ನಲ್ಲಿಯೂ ಸಹ ಉಲ್ಲೇಖಿಸಲಾಗಿದೆ. ಈ ಪ್ರಕ್ರಿಯೆಯು ಎರಡು ದಶಕಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿದೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಗತ್ಯವಿರುವ ಮಾನದಂಡಗಳನ್ನು ಪೂರೈಸುವವರನ್ನು ಮಾತ್ರ ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳು ಅಗತ್ಯವೆಂದು ಕಂಪನಿ ವಾದಿಸಿದೆ. ಏತನ್ಮಧ್ಯೆ, NITES ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸಿದ್ದು, ಇನ್ಫೋಸಿಸ್ ವಿರುದ್ಧ ತಕ್ಷಣದ ಹಸ್ತಕ್ಷೇಪ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ ಎಂದು ವರದಿ ಉಲ್ಲೇಖಿಸಿದೆ. "ಈ ಸ್ಪಷ್ಟ ಕಾರ್ಪೊರೇಟ್ ಶೋಷಣೆ ಮುಂದುವರಿಯಲು ಬಿಡಲಾಗುವುದಿಲ್ಲ ಮತ್ತು ಭಾರತೀಯ ಐಟಿ ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಸಲುಜಾ ಹೇಳಿದ್ದಾರೆ,(ಏಜೆನ್ಸೀಸ್).