ಹೂಡಿಕೆಗೆ ಐಟಿ ಎನರ್ಜಿ: ಬೆಂಗಳೂರು ಟೆಕ್ ಶೃಂಗಕ್ಕೆ ಚಾಲನೆ; ಆರ್-ಡಿ ನೀತಿ ಅನಾವರಣ

Front
ಬೆಂಗಳೂರು ಟೆಕ್ ಶೃಂಗದಲ್ಲಿ ಸಿಎಂ ಬೊಮ್ಮಾಯಿ ಸಂಶೋಧನೆ, ಅಭಿವೃದ್ಧಿ ನಾವೀನ್ಯತಾ ನೀತಿ ಬಿಡುಗಡೆಗೊಳಿಸಿದರು. ಸಚಿವರಾದ ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ ಇತರರಿದ್ದರು.
Published on

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬೆನ್ನಲ್ಲೇ ಆರ್ಥಿಕತೆಗೆ ಎನರ್ಜಿ ತುಂಬಲು ರಾಜ್ಯದ ಉತ್ಸಾಹ ಮುಂದುವರಿದಿದ್ದು, ಏಷ್ಯಾದ ಅತಿ ದೊಡ್ಡ ಬೆಂಗಳೂರು ಟೆಕ್ ಶೃಂಗ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆರು ತಿಂಗಳೊಳಗೆ ಸ್ಟಾರ್ಟಪ್ ಪಾರ್ಕ್ ಹಾಗೂ ಆರು ಉಪನಗರಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ, ನವೋದ್ಯಮ ವಲಯಕ್ಕೆ ಚೈತನ್ಯ ತುಂಬುವ ಕೊಡುಗೆ ಪ್ರಕಟಿಸಿದರು.

ಜಾಗತಿಕ ಐಟಿ-ಬಿಟಿ ದಿಗ್ಗಜರು, ಹೊಸ ತಂತ್ರಜ್ಞಾನದ ಅನ್ವೇಷಕರನ್ನು ಕೈಬೀಸಿ ಕರೆಯುವ ಮೂಲಕ ಹೂಡಿ ಕೆಗೆ ಈ ಸಮಾವೇಶ ಎನರ್ಜಿ ತುಂಬಿದ್ದು, ಅದೇ ರೀತಿ ಭೌಗೋಳಿಕ, ರಾಜಕೀಯ ಸೂಕ್ಷ್ಮ ಪರಿಸ್ಥಿತಿ ಹಾಗೂ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಜಗತ್ತಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಈ ವೇದಿಕೆ ಮೂಲಕ ನಡೆದಿದೆ. ಇದೇ ಧಾಟಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರ ಅಭಿಪ್ರಾಯಕ್ಕೆ ಬೇರೆ ಬೇರೆ ದೇಶದ ಪ್ರತಿನಿಧಿಗಳು ದನಿಗೂಡಿಸಿದ್ದಕ್ಕೂ ಸಹ ಸಾಕ್ಷಿಯಾಯಿತು.

ಐಟಿ ಬಿಟಿ, ನವೋದ್ಯಮ ಕ್ಷೇತ್ರದ ‘ಮರು ವಿನ್ಯಾಸ’ದ ಚರ್ಚೆ ಈ ಸಮಾವೇಶದ ಮೊದಲ ಮುಖ್ಯಾಂಶವಾಗಿ ಕಾಣಿಸಿದೆ. ಹೊಸ ಜಮಾನದ ಡೀಪ್ ಟೆಕ್, ಕೃತಕ ಬುದ್ಧಿಮತ್ತೆ, ಫಿನ್​ಟೆಕ್, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಮುಂತಾದ ಹೊಸ ತಂತ್ರಜ್ಞಾನಗಳು ಆವರಿಸಿಕೊಳ್ಳುತ್ತಿರುವ ಬಗೆಯನ್ನು ವಿಶ್ವಕ್ಕೆ ತೆರೆದಿಟ್ಟಿದೆ. ಉದ್ಯಮಿಗಳು, ತಂತ್ರಜ್ಞರು, ಹೂಡಿಕೆದಾರರು, ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಂಡರೆ, ವಿದೇಶಿಗರು, ನೆರೆ ರಾಜ್ಯದವರ ಪಾಲ್ಗೊಳ್ಳುವಿಕೆ ಸಹ ಗಮನ ಸೆಳೆದಿದೆ.

ಮುಖ್ಯವಾಗಿ ಅಂತಾರಾಷ್ಟ್ರೀಯ ಸಂಬಂಧದ ವಿಚಾರ ದಲ್ಲಿ ಐಟಿ-ಬಿಟಿ ಕ್ಷೇತ್ರ ಭಾರತದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದು, ವೇದಿಕೆಯಲ್ಲಿ ಮಾತನಾಡಿದ ಆಸ್ಟ್ರೇಲಿಯಾ, ಫಿನ್ಲೆಂಡ್, ಯುಎಇ ಸಚಿವರು ಭಾರತದ ಜತೆಗಿನ ಸಹಭಾಗಿತ್ವದ ಉತ್ಸುಕತೆ ತೋರಿಸಿದರು. ತಂತ್ರಜ್ಞಾನ ಮಾನವ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕೆಂಬ ಮೋದಿ ಮಾತನ್ನು ಸಮಾವೇಶವು ದಿಕ್ಸೂಚಿಯ ರೀತಿಯಲ್ಲಿಯೇ ಪರಿಗಣಿಸಿದ್ದು ವಿಶೇಷ.

ಇನ್ನೊಂದು ಪ್ರಮುಖ ಸಂಗತಿ ಎಂದರೆ, ಐಟಿಬಿಟಿ ಕ್ಷೇತ್ರದ ಏರಿಳಿತ, ಆರ್ಥಿಕ ಕುಸಿತ ಸಾಧ್ಯತೆಗಳಿಂದ ಎದೆಗುಂದಬೇಕಿಲ್ಲ. ಇದೆಲ್ಲ ಸಹಜ ಬೆಳವಣಿಗೆ ಎಂದು ಮಾಹಿತಿ ತಂತ್ರಜ್ಞಾನ ವಿಜನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ವಿಶ್ವಾಸ ತುಂಬಿದ್ದು, ಕಿರಣ್ ಮುಜುಂದಾರ್ ಷಾ ‘ಡ್ರೀಮ್ ಬಿಗ್, ಥಿಂಕ್ ಗ್ಲೋಬಲ್’ ಎಂದು ಹುರುಪು ತುಂಬಿದರು.

ನಾವೀನ್ಯತೆ ದಿಗ್ಧರ್ಶನ: ಬಿಟಿಎಸ್ ನಿಮಿತ್ತ ಆಯೋಜಿಸಿರುವ ಪ್ರದರ್ಶನವು ಹೊಸ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಿದೆ. 500ಕ್ಕೂ ಹೆಚ್ಚು ಮಳಿಗೆಗಳಲ್ಲಿ 330 ಸ್ಟಾರ್ಟ್​ಅಪ್​ಗಳು ಬೆರಗುಗೊಳಿಸುವ ಸಾಧನ, ಸಾಮಗ್ರಿ, ತಂತ್ರಜ್ಞಾನ ಇಲ್ಲಿ ಅನಾವರಣಗೊಂಡಿದೆ.

ಗಣ್ಯರ ಉಪಸ್ಥಿತಿ: ಸಮಾರಂಭದಲ್ಲಿ ಫಿನ್ಲೆಂಡ್ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ ಕೊನೆನ್, ಯುನೈಟೆಡ್ ಎಮಿರೇಟ್ಸ್​ನ ಡಿಜಿಟಲ್ ಎಕಾನಮಿ ಸಚಿವ ಓಮರ್ ಬಿನ್ ಸುಲಾನ್ ಅಲ್ ಒಲಾಮ, ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವ್ಯಾಟ್, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಯೋಟೆಕ್ನಾಲಜಿ ವಿಷನ್ ಗ್ರೂಪ್ ಅಧ್ಯಕ್ಷೆ ಡಾ.ಕಿರಣ್ ಮುಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ಐಟಿ-ಬಿಟಿ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ಸಾಧ್ಯತೆಗಳನ್ನು ಕಂಡುಕೊಳ್ಳಲು ಭಾರತದ ಜತೆಗೆ ಕೆಲಸ ಮಾಡಲು ನಮ್ಮ ದೇಶ ಉತ್ಸುಕವಾಗಿದೆ. | ಟಿಮ್ ವ್ಯಾಟ್ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಭಾರತವು ಯುಎಇಯ ಸಹಜ ಪ್ರೀತಿಯ ದ್ಯೋತಕವಾಗಿದೆ. ಹೊಸ ತಲೆಮಾರಿನ ತಂತ್ರಜ್ಞಾನ, ಭವಿಷ್ಯದ ಬೆಳವಣಿಗೆ ಜಾಗತಿಕವಾಗಿ ಮಹತ್ವ ಪಡೆದ ಆರೋಗ್ಯ, ಶಿಕ್ಷಣ, ಹಣಕಾಸು ತಂತ್ರಜ್ಞಾನದಲ್ಲಿ ಪರಸ್ಪರ ಒಂದಾಗಿ ಕೆಲಸ ಮಾಡಲು ನಮ್ಮ ದೇಶ ಉತ್ಸುಕವಾಗಿದೆ. | ಉಮರ್ ಬಿನ್ ಸುಲ್ತಾನ್ ಅಲ್ ಉಲಾಮ ಯುಎಇ ಕೃತಕ ಬುದ್ಧಿ ಮತ್ತೆ ಡಿಜಿಟಲ್ ಎಕಾನಮಿ ಸಚಿವ

ಮುಖ್ಯಾಂಶಗಳು

  • ರಾಜ್ಯದ ಎಲೆಕ್ಟ್ರಾನಿಕ್ ವಲಯದಲ್ಲಿ ವಿವಿಧ ಕಂಪನಿಗಳು ಶೀಘ್ರವೇ 36 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ
  • ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿದ ಆರು ನಗರಗಳ ಸ್ಥಾಪನೆ ಘೋಷಣೆ
  • ರಾಜ್ಯದಲ್ಲಿ ಇನ್ನೂ 20 ನವೋದ್ಯಮಗಳಿಗೆ ಶೀಘ್ರವೇ ಯೂನಿಕಾರ್ನ್ ಸ್ಥಾನಮಾನ ಸಾಧ್ಯತೆ

ಮೋದಿ ಭಾಷಣದ ಹೈಲೈಟ್

  • ಜಿಇಎಂ ಸಹಾಯ್’ಸರ್ಕಾರ ನಡೆಸುವ ಯಶಸ್ವಿ ಇ-ಕಾಮರ್ಸ್ ವೇದಿಕೆ. ಇಲ್ಲಿ ಬಳಸಿದ ತಂತ್ರಜ್ಞಾನವು ಸಣ್ಣ ಉದ್ಯಮಗಳಿಗೆ ದೊಡ್ಡ ಗ್ರಾಹಕರನ್ನು ಹುಡುಕಲು ಸಹಾಯ ಮಾಡಿದೆ.
  • ಇದು ಭ್ರಷ್ಟಾಚಾರದ ವ್ಯಾಪ್ತಿಯನ್ನು ಕಡಿಮೆ ಮಾಡಿದೆ. ಆನ್​ಲೈನ್ ಟೆಂಡರ್​ಗೆ ಸಹಾಯ ಮಾಡಿದೆ. ಇದು ಯೋಜನೆಗಳನ್ನು ವೇಗಗೊಳಿಸಿದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿದೆ.
  • ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಸುಮಾರು 200 ದಶಲಕ್ಷ ಕುಟುಂಬಗಳಿಗೆ ಸುರಕ್ಷತಾ ಜಾಲವನ್ನು ಒದಗಿಸುತ್ತದೆ
  • ತಂತ್ರಜ್ಞಾನ ವೇದಿಕೆಗಳಲ್ಲಿ ಚಲಿಸುವ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾದ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಯಿತು. ಅಲ್ಲದೇ ಸಾಮಾಜಿಕ ಯೋಜನೆಗಳಿಗೆ ಬೆನ್ನೆಲುಬಾಗಿದೆ.
  • ಸ್ವಮಿತ್ವ ಯೋಜನೆಯು ಆಸ್ತಿ ದಾಖಲೆಗೆ ಅಧಿಕೃತತೆಯನ್ನು ತಂದಿತು ಮತ್ತು ಬಡವರಿಗೆ ಸಾಲಕ್ಕೆ ಅನುವು ಮಾಡಿಕೊಟ್ಟಿದೆ.

ರೆಡ್​ಕಾರ್ಪೆಟ್ ಸ್ವಾಗತ; ಹೂಡಿಕೆದಾರರಿಗೆ ಮೋದಿ ವಿಶ್ವಾಸದ ಕರೆಯೋಲೆ

ಬೆಂಗಳೂರು: ಬಂಡವಾಳ ಹೂಡಿಕೆದಾರರ ಪಾಲಿಗೆ ಹಿಂದಿನ ರೆಡ್ ಟೇಪಿಸಂ ಸಮಸ್ಯೆ ಕೊನೆಗೊಂಡಿದ್ದು, ಈಗ ರತ್ನಗಂಬಳಿಯ ಸ್ವಾಗತವಿದೆ ಎಂದು ವ್ಯಾಖ್ಯಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಹೂಡಿಕೆ ಹಾಗೂ ನಮ್ಮ ನಾವೀನ್ಯತೆ ಅದ್ಭುತಗಳನ್ನು ಮಾಡಬಹುದು. ನಿಮ್ಮ ನಂಬಿಕೆ, ನಮ್ಮ ತಾಂತ್ರಿಕ ಪ್ರತಿಭೆ ಒಳ್ಳೆಯ ಕೆಲಸ ಮಾಡಬಹುದು ಎಂದು ಜಾಗತಿಕ ಹೂಡಿಕೆ ದಾರರಿಗೆ ಮೋದಿ ಕರೆಕೊಟ್ಟಿದ್ದಾರೆ. 25ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ವರ್ಚುಯಲ್ ವೇದಿಕೆ ಮೂಲಕ ಮಾತನಾಡಿದರು.

ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 40 ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ. ಹಾಗೆಯೇ ನಮ್ಮಲ್ಲಿ ಅತಿ ಅಗ್ಗದ ದರದಲ್ಲಿ ಡೇಟಾ ದೊರೆಯುತ್ತಿದೆ. ಕಳೆದ 8 ವರ್ಷಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕಗಳು 60 ದಶಲಕ್ಷದಿಂದ 810 ದಶಲಕ್ಷಕ್ಕೆ ಏರಿತು. ಸ್ಮಾರ್ಟ್ ಫೋನ್ ಬಳಕೆದಾರರು 150 ದಶಲಕ್ಷದಿಂದ 750 ದಶಲಕ್ಷಕ್ಕೆ ಏರಿದ್ದಾರೆ. ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ. ಮೂಲಸೌಲಭ್ಯ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ 100 ಟ್ರಿಲಿಯನ್ ಡಾಲರ್​ನಷ್ಟು ಹೂಡಿಕೆ ಆಗಲಿದೆ ಎಂದರು.

ಪ್ರಧಾನಿ ಗುಣಗಾನ: ‘ಎಲ್ಲರಿಗೂ ನಮ್ಮ ಕರ್ನಾಟಕಕ್ಕೆ ಸ್ವಾಗತ, ನಮ್ಮ ಬೆಂಗಳೂರಿಗೆ ಸ್ವಾಗತ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಬೆಂಗಳೂರು ಸಂಶೋಧನೆಯ ತಾಣವಾಗಿದ್ದು, ಇಲ್ಲಿ ತಂತ್ರಜ್ಞಾನ ಕ್ರಾಂತಿ ಸಂಭವಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net