ಅಂಗೈಲಿ 41,849 ಕೆರೆಗಳ ಮಾಹಿತಿ

lake
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಜಲ ಸಂಪನ್ಮೂಲ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೆರೆಗಳ ರಕ್ಷಣೆ ಸಲುವಾಗಿ ಕಂದಾಯ ಇಲಾಖೆ ಹೆಲಿಕಾಪ್ಟರ್, ಡ್ರೋಣ್ ಮತ್ತು ರೋವರ್ ಬಳಸಿ ಸರ್ವೇ ಮಾಡಿ ಡಿಜಿಟಲ್ ಸ್ಪರ್ಶ ನೀಡಿದೆ.

ಕ್ಯೂಜಿಐಎಸ್ ತಂತ್ರಾಂಶದಲ್ಲಿ (ಕ್ವಾಂಟಮ್ ಭೌಗೋಳಿಕ ಮಾಹಿತಿ ವ್ಯವಸ್ಥೆ) ಕೆರೆಗಳ ಡಿಜಿಟಲ್ ಸರ್ವೇಯನ್ನು ಅಪ್‌ಲೋಡ್ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಪ್ಲಿಕೇಷನ್‌ನಲ್ಲಿ ಒಂದು ಬಟನ್ ಒತ್ತಿದರೆ ಸಾಕು ಕೆರೆಯ ಸಂಪೂರ್ಣ ಮಾಹಿತಿ ನೀಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ 41,849 ಕೆರೆಗಳಿದ್ದು, 7,77,319 ಎಕರೆ ಕೆರೆ ಅಂಗಳವಿದೆ. ಆದರೆ, ಈ ಪೈಕಿ ಸಾಕಷ್ಟು ಕೆರೆಗಳು ಸಂಪೂರ್ಣ ಮತ್ತು ಭಾಗಶಃ ಒತ್ತುವರಿಯಾಗಿರುವುದು ಗಮನಿಸಬಹುದಾಗಿದೆ. ಭವಿಷ್ಯದ ದೃಷ್ಟಿಯಿಂದ ಜಲಮೂಲ ಸಂರಕ್ಷಣೆ ಸಲುವಾಗಿ ಕೆರೆಗಳ ರಕ್ಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕೆರೆಗಳ ಅಳತೆಗೆ ಸರ್ಕಾರ ನಿರ್ಧರಿಸಿತ್ತು. 2013-23ರವರೆಗೆ ಕೇವಲ 27,206 ಕೆರೆಗಳ ಅಳತೆ ನಡೆದಿತ್ತು. ಕಳೆದ 2 ವರ್ಷದಲ್ಲಿ ಹೆಲಿಕಾಪ್ಟರ್, ರೋವರ್ ಮತ್ತು ಡ್ರೋಣ್ ಬಳಸಿ 8,433 ಕೆರೆಗಳನ್ನು ಡಿಜಿಟಲ್ ಅಳತೆ ಮಾಡಲಾಗಿದೆ. ಉಳಿದ 6,210 ಕೆರೆಗಳ ಸರ್ವೇ ಬಾಕಿ ಉಳಿದಿದೆ. ಇದರಲ್ಲಿ ಹಾಸನ ಜಿಲ್ಲೆಯಲ್ಲಿ 2,808 ಕೆರೆ ಮತ್ತು ಕೋಲಾರದಲ್ಲಿ 1,374 ಕೆರೆಗಳ ಅಳತೆ ಬಾಕಿ ಉಳಿದಿವೆ. ಇನ್ನೂ 21 ಜಿಲ್ಲೆಗಳಲ್ಲಿ ಸರ್ವೇ ಪೂರ್ಣಗೊಂಡಿದೆ. ಬಾಕಿ ಉಳಿದ 6,210 ಕೆರೆಗಳ ಸರ್ವೇಯನ್ನು 6 ತಿಂಗಳ ಒಳಗಾಗಿ ಅಳತೆ ಪೂರ್ಣ ಮಾಡಲು ಇಲಾಖೆ ಪಣತೊಟ್ಟಿದೆ.

150 ವರ್ಷಗಳ ಇತಿಹಾಸ ಹೊಂದಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ತನ್ನ ಸರ್ವೇ ದಾಖಲೆಗಳ ಮೂಲ ನಕ್ಷೆಯನ್ನು ಸಂರಕ್ಷಣೆ ಮಾಡಿದೆ. ಅದರ ಪ್ರಕಾರ ಶತಮಾನಗಳ ಹಿಂದೆ ನಿರ್ಮಾಣಗೊಂಡಿದ್ದ ಕೆರೆಗಳ ಮಾಹಿತಿಯನ್ನು ಡಿಜಿಟಲ್ ಸರ್ವೇಯಲ್ಲಿ ಉಳಿಸಿಕೊಂಡಿರುವುದು ವಿಶೇಷವಾಗಿದೆ.

ಉದಾಹರಣೆಗೆ ಮೆಜೆಸ್ಟಿಕ್, ದೊಮ್ಮಲೂರು ಕೆರೆ, ಎಚ್‌ಎಎಲ್, ಕೋರಮಂಗಲ ಸಾಕಷ್ಟು ಕೆರೆಗಳನ್ನು ಮುಚ್ಚಿದ್ದರೂ ದಾಖಲೆಯಲ್ಲಿ ಒತ್ತುವರಿ ಎಂದೇ ಉಲ್ಲೇಖಿಸಲಾಗಿದೆ. ಕೇಂದ್ರ ಭೂ ಸರ್ವೇ ಇಲಾಖೆಯ ಗ್ಲೋಬಲ್ ನಾವಿಗೇಷನ್ ಸ್ಯಾಟಲೈಟ್ ಸಿಸ್ಟಂ ಸಹಾಯದಿಂದ ರಾಜ್ಯದಲ್ಲಿ ಸ್ಥಾಪಿತ 49 ಕೊರ್ಸ್‌ ಸೆಂಟರ್‌ಗಳ (ನಿರಂತರವಾಗಿ ಕಾರ್ಯನಿರ್ವಹಿಸುವ ಕೇಂದ್ರ) ಸಹಾಯದಿಂದ ಕೆರೆ ಗಡಿ ಮತ್ತು ವಿಸ್ತೀರ್ಣ ಗುರುತು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅಳತೆಯಲ್ಲಿ ಏರುಪೇರು ಆಗುವುದಿಲ್ಲ. ಎಷ್ಟೇ ವರ್ಷ ಆದ ಮೇಲೂ ಸ್ಯಾಟಲೈಟ್ ಸಿಸ್ಟಂ ಮಾಹಿತಿ ಪಡೆದು ಕೆರೆ ಅಂಗಳ ಅಳತೆ ಮಾಡಬಹುದು ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಕ್ಯೂಜಿಐಎಸ್‌ನಲ್ಲಿ ಮಾಹಿತಿ ಲಭ್ಯ

ಕೆರೆಗಳ ಡಿಜಿಟಲ್ ಸರ್ವೇ ಮಾಹಿತಿಯನ್ನು ಕ್ಯೂಜಿಐಎಸ್ ತಂತ್ರಾಂಶದಲ್ಲಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಕ್ಯೂಜಿಐಎಸ್ ಅಪ್ಲಿಕೇಷನ್‌ನಲ್ಲಿ ಕೆರೆಗಳ ಮಾಹಿತಿ ವೀಕ್ಷಣೆ ಮತ್ತು ಬಳಕೆ ಮಾಡುವುದಕ್ಕೆ ಕೇವಲ ಸರ್ಕಾರಿ ಇಲಾಖೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪೂರ್ಣಗೊಂಡ ಮೇಲೆ ಕಂದಾಯ ಇಲಾಖೆಯ ತಂತ್ರಾಂಶಗಳಂತೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗುತ್ತದೆ. ಒಂದು ಬಟನ್ ಒತ್ತಿದರೆ ಸಾಕು ಕೆರೆ ವಿಸ್ತೀರ್ಣ, ಒತ್ತುವರಿ, ಯಾವ ಇಲಾಖೆ ಅಡಿಯಲ್ಲಿದೆ, ಕೆರೆಯ ಗಡಿ ಸಮೇತ ಮಾಹಿತಿ ನೀಡಲಿದೆ. ಡಿಜಿಟಲ್ ಸರ್ವೇ ಕಾರಣ ಜಿಯೋ ೆನ್ಸಿಂಗ್ ಸಹ ಬೀಳಲಿದೆ.

31 ಜಿಲ್ಲೆಗಳಲ್ಲಿನ ಕೆರೆಗಳು, ವಿಸ್ತೀರ್ಣ, ಅಳತೆ ಮಾಹಿತಿ

ಒಟ್ಟು ಕೆರೆಗಳು 41,849

ಒಟ್ಟು ವಿಸ್ತೀರ್ಣ 7,77,319 ಎಕರೆ

ಅಳತೆಯಾದ ಕೆರೆ 35,639

ಅಳತೆಯಾದ ಕೆರೆ ವಿಸ್ತೀರ್ಣ 6,85,387 ಎಕರೆ

ಅಳತೆ ಬಾಕಿ ಇರುವ ಕೆರೆ 6,210

ಅಳತೆ ಬಾಕಿ ಇರುವ ಕೆರೆ ಜಾಗ 91,857 ಎಕರೆ

ಒತ್ತುವರಿಯಾದ ಕೆರೆ ಸಂಖ್ಯೆ 13,326

ಒತ್ತುವರಿಯಾದ ಕೆರೆ ಜಾಗ 43,287 ಎಕರೆ

ಜಲಸಂಪನ್ಮೂಲ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಒತ್ತುವರಿಗೆ, ಕಬ್ಜ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕೆರೆಗಳನ್ನು ಡಿಜಿಟಲ್ ಸರ್ವೇ ಮಾಡಿದ್ದು, ಪದೇಪದೆ ಅಳತೆ ಮಾಡುವ ಅಗತ್ಯ ಇರುವುದಿಲ್ಲ. ಒತ್ತುವರಿ ತೆರವಿಗೂ ಅನುಕೂಲವಾಗಲಿದೆ.

ಜೆ.ಮಂಜುನಾಥ್, ಆಯುಕ್ತ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net