ಆರ್​ಟಿಐ ಬಗ್ಗೆ ಪಠ್ಯದಲ್ಲಿ ಸೇರಿಸಲು ಸರ್ಕಾರಕ್ಕೆ ಮಾಹಿತಿ ಆಯೋಗ ಶಿಫಾರಸು

ವಿಜಯವಾಣಿ (41)
Published on

ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆಗೆ ಉತ್ತೇಜನ, ಭ್ರಷ್ಟಾಚಾರಕ್ಕೆ ತಡೆ ಹಾಕುವ ಉದ್ದೇಶದಿಂದ ಜಾರಿಗೊಳಿಸಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪಠ್ಯ ರೂಪಿಸುವಂತೆ ಕರ್ನಾಟಕ ಮಾಹಿತಿ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಸೋಮವಾರ (ಜುಲೈ 14) ರಂದು ಮಾಹಿತಿ ಹಕ್ಕು ಅಧಿನಿಯಮ ಕುರಿತು ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ಮಾಡಬೇಕಾದ ಪ್ರಮುಖ ವಿಷಯಗಳ ಕುರಿತು ರಾಜ್ಯ ಮಾಹಿತಿ ಆಯುಕ್ತರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ರನ್ನು ಭೇಟಿಯಾದ ಮಾಹಿತಿ ಹಕ್ಕು ಅಧಿನಿಯಮದ ಪರಿಣಾಮಕಾರಿ ಜಾರಿಗೆ ಅಗತ್ಯವಾದ ಶಿಫಾರಸುಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ. ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುವಂತೆ ಒತ್ತಾಯಿಸಿದ್ದಾರೆ.

ಆಯೋಗ ಮಾಡಿರುವ ಶಿಫಾರಸುಗಳು ಹೀಗಿವೆ

* ಪದವಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ಪಠ್ಯವಾಗಿ ಅಳವಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಅಧಿನಿಯಮದ ಬಗ್ಗೆ ಅರಿವು ಮೂಡುತ್ತದೆ. ಈ ಬಗ್ಗೆ ಪಠ್ಯ ಪರಿಷ್ಕರಣಾ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಂಡಳಿಗಳಿಗೆ ಶಿಫಾರಸು ಮಾಡುವಂತೆ ಕೋರಲಾಗಿದೆ.

* ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳಾಗಿದ್ದರೂ ಸರ್ಕಾರಿ ಅಧಿಕಾರಿ ಮತ್ತು ನೌಕರರಲ್ಲಿ ಇನ್ನೂ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳು ನೌಕರರಿಗಾಗಿ ನಡೆಸುವ ವಿವಿಧ ಪರೀಕ್ಷೆಗಳಲ್ಲಿಯೂ ಮಾಹಿತಿ ಹಕ್ಕು ಕಾಯ್ದೆಯನ್ನು ಒಂದು ವಿಷಯವನ್ನಾಗಿ ಸೇರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಮಾತ್ರ ಬಡ್ತಿ, ವೇತನ ಪರಿಕ್ಷರಣೆಗೆ ಅರ್ಹತೆ ಎಂಬ ಬಗ್ಗೆ ಅಧಿಸೂಚನೆ ಹೊರಡಿಸಬೇಕೆಂದು ಸಲಹೆ ನೀಡಲಾಗಿದೆ.

  • ಸರ್ಕಾರದ ಅಧಿಕಾರಿ ಮತ್ತು ನೌಕರರಿಗೆ ಈಗಾಗಲೇ ವಿವಿಧ ವಿಷಯಗಳಲ್ಲಿ ತರಬೇತಿ ನೀಡುತ್ತಿರುವ ರೀತಿಯಲ್ಲಿಯೇ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆಯೂ ತರಬೇತಿ ಅಗತ್ಯವಾಗಿದೆ. ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಬೆಂಗಳೂರಿನ ವಿತ್ತೀಯ ಕಾರ್ಯನೀತಿ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನಡೆಯುವ ತರಬೇತಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಸಹ ಒಂದು ವಿಷಯವಾಗಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಎಆರ್) ಇಲಾಖೆಯ ವ್ಯಾಪ್ತಿಯಲ್ಲಿ ಆರ್‌ಟಿಐ ಡ್ಯಾಷ್‌ಬೋರ್ಡ್ ಇದೆ. ಆದರೆ ಅದು ಬಳಕೆಯಾಗುತ್ತಿಲ್ಲ. ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಮಾಹಿತಿ ಆಯೋಗಕ್ಕೆ ವಹಿಸಿಕೊಡಬೇಕು.
  • ಸರ್ಕಾರದ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಮಾಹಿತಿ ಹಕ್ಕು ನಿಯಮಗಳ ಕುರಿತು ೪(೧)(ಎ) ಮತ್ತು ೪(೧)(ಬಿ) ಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವಂತೆ ಸುತ್ತೋಲೆ ಹೊರಡಿಸಬೇಕು.
  • ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸುವ ರೀತಿಯಲ್ಲಿಯೇ, ಪ್ರಥಮ ಮೇಲ್ಮನವಿಗಳನ್ನು ವಿಚಾರಣೆ ಮಾಡದ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೂ ದಂಡ ಹಾಗೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವ ರೀತಿಯಲ್ಲಿ ಸುತ್ತೋಲೆ ಹೊರಡಿಸಬೇಕು.
  • ಕರ್ನಾಟಕ ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಪ್ರಕರಣಗಳು ವಿಲೇವಾರಿಯಾಗಿವೆ. ಆದರೆ ಕಡತಗಳು ಇದುವರೆಗೂ ನಾಶವಾಗಿಲ್ಲ. ಆದ್ದರಿಂದ ಕಟ್ಟಡದ ತುಂಬ ಕಡತಗಳ ರಾಶಿಯೇ ಇದೆ. ಅವುಗಳ ವಿಲೇವಾರಿಗೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮ 2013ರ ಪ್ರಕಾರ ಕ್ರಮ ಕೈಗೊಳ್ಳಬೇಕು.
  • ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಕಟ್ಟಡದಲ್ಲಿ ಮುಖ್ಯ ಆಯುಕ್ತರು ಹಾಗೂ ಆರು ಆಯುಕ್ತರಿಗೆ ಪೀಠಗಳಿವೆ. ಉಳಿದ ಎರಡು ಪೀಠಗಳು ಬಾಡಿಗೆ ಕಟ್ಟಡದಲ್ಲಿವೆ. ಪ್ರತಿ ವರ್ಷ ಐವತ್ತು ಲಕ್ಷ ರೂ.ಗಳು ಬಾಡಿಗೆಗಾಗಿ ವ್ಯಯ ಮಾಡಲಾಗುತ್ತಿದೆ. ಹಾಲಿ ಕಟ್ಟಡದಲ್ಲಿ ನಾಲ್ಕನೆ ಮಹಡಿ ಕಟ್ಟಿದರೆ ಬಾಡಿಗೆಗಾಗಿ ವ್ಯಯ ಮಾಡುವ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಕಲಬುರಗಿ ಪೀಠವು ಅಲ್ಲಿನ ರೈಲ್ವೆ ನಿಲ್ದಾಣದ ಹಳೆಯ ಮನೆಯಲ್ಲಿದೆ. ಕರ್ನಾಟಕ ಆಡಳಿತ ನ್ಯಾಯಾಧೀಕರಣ ಪಕ್ಕದ ನಿವೇಶನವನ್ನು ಪಡೆದು ಪೀಠವನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು.
  •  ನ್ಯಾಯ ಪೀಠಗಳು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಆಯುಕ್ತರಿಗೂ ಗನ್‌ಮ್ಯಾನ್ ಸಹ ಒದಗಿಸಿಲ್ಲ. ಮುಖ್ಯ ಆಯುಕ್ತರ ಪೀಠಕ್ಕೆ ಮಾತ್ರ ಭದ್ರತೆ ಮತ್ತು ಅವರಿಗೆ ಮಾತ್ರ ಗನ್‌ಮ್ಯಾನ್ ಒದಗಿಸಲಾಗಿದೆ. ಆದ್ದರಿಂದ ನ್ಯಾಯಪೀಠಗಳಿಗೆ ಹಾಗೂ ಆಯುಕ್ತರಿಗೆ ಗನ್‌ಮ್ಯಾನ್ ಸೌಲಭ್ಯ ಒದಗಿಸಬೇಕು.

ಸಿ ಅಂಡ್ ಆರ್ ನಿಯಮ ಅಗತ್ಯ

ಕರ್ನಾಟಕ ಮಾಹಿತಿ ಆಯೋಗದ ಸಿಬ್ಬಂದಿ ಸಮಸ್ಯೆ ಬಹಳ ಇದೆ. ಕಾಯಂ ಸಿಬ್ಬಂದಿಗಳೇ ಇಲ್ಲ. ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷವಾದರೂ ಸರ್ಕಾರ ಸಿಬ್ಬಂದಿಗೆ ಸಂಬಂಧಿಸಿದಂತೆ ಸಿ ಅಂಡ್ ಆರ್ ನಿಯಮಗಳನ್ನೇ ರೂಪಿಸಿಲ್ಲ. ಕೂಡಲೇ ನಿಯಮಗಳನ್ನು ರೂಪಿಸುವ ಮೂಲಕ ಸಿಬ್ಬಂದಿ ಸಮಸ್ಯೆ ಬಗೆ ಹರಿಸಬೇಕು.

ಲೋಕಾಯುಕ್ತದಲ್ಲಿನ ಹೊರಗುತ್ತಿಗೆ ಸಿಬ್ಬಂದಿಗಳಿಗೆ ರಾಜ್ಯ ಕಾರ್ಮಿಕ ಇಲಾಖೆಯ ವೇತನ ಪರಿಷ್ಕರಣೆಯಾಗಿ ಹೊಸ ವೇತನ ಜಾರಿಗೆ ಬಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಮಾಹಿತಿ ಆಯೋಗ ಪೀಠಗಳಲ್ಲಿ ಕಾರ್ಯ ನಿರ್ವಹಿಸುವ ತೀರ್ಪು ಬರಹಗಾರರು, ಶೀಘ್ರಲಿಪಿಗಾರರು, ಕಾನೂನು ಸಹಾಯಕರು, ದತ್ತಾಂಶ ನಮೂದಕರು, ಸಹಾಯಕರು, ದಲಾಯತ್‌ಗಳಿಗೆ ವೇತನ ಪರಿಷ್ಕರಣೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net