

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಗೆ ನಿಯೋಜನೆಯಾಗಿರುವ ಆರ್‌ಒ ಮತ್ತು ಎಆರ್‌ಒಗಳಿಗೆ ಚುನಾವಣಾ ಕೈಪಿಡಿ ನೀಡಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಆಯಾ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳನ್ನು ಬೇಗ ತಲುಪುವ ರೀತಿಯಲ್ಲಿ ಸೆಕ್ಟರ್ ಮ್ಯಾಪ್ ಮತ್ತು ರೂಟ್ ಮ್ಯಾಪ್ ಸಿದ್ಧಪಡಿಸಿ ಸಲ್ಲಿಸಬೇಕು, ಸ್ಟ್ರಾಂಗ್ ಟೀಮ್ ರಚಿಸಬೇಕು, ಚುನಾವಣೆಯ ದಿನ ಬೇಕಾಗುವ ವಾಹನಗಳ ಪಟ್ಟಿ ಸಲ್ಲಿಸಬೇಕು, ಸೆಕ್ಟರ್‌ವೈಸ್ ಪ್ರಕಾರ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ವ್ಯವಸ್ಥೆ ರೂಪಿಸಬೇಕು ಎಂದರು.
ವಿಧಾನಸಭಾ ಕ್ಷೇತ್ರವಾರು, ತಾಲೂಕುವಾರು, ಪ್ರಿಂಟಿಗ್ ಪ್ರೆಸ್ ಮಾಲೀಕರ ಸಭೆ ಕರೆದು ಮಾಹಿತಿ ಸಿದ್ಧಪಡಿಸುವಂತೆ, 80+ ಮತದಾರರಿಗೆ ಅಂಚೆ ಮತಪತ್ರ ನೀಡುವ ಬಗ್ಗೆ ಕಂಟ್ರೋಲ್ ರೂಮ್ ಮತ್ತು ದೂರು ಕೇಂದ್ರಗಳನ್ನು ಸ್ಥಾಪಿಸುವಂತೆ, ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ಶೌಚಗೃಹ ಮತ್ತು ರ‌್ಯಾಂಪ್ ಹೊಂದಿರುವ ಕುರಿತು ಆರ್‌ಒಗಳು ಕಡ್ಡಾಯವಾಗಿ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲಿಸಬೇಕು ಎಂದರು.
ಸಮಾಧಾನ, ಸುವಿಧಾ, ಸಿಂಗಲ್ ವಿಂಡೋ ಡೆಸ್ಕ್‌ಗಳನ್ನು ಆರ್‌ಒ ಕಚೇರಿಯಲ್ಲಿ ಸ್ಥಾಪಿಸಬೇಕು. ಸಿ-ವಿಗಿಲ್ ಮಾನಿಟರಿಂಗ್ ಕೇಂದ್ರ ಸ್ಥಾಪಿಸಬೇಕು, ವಾಹನಗಳಿಗೆ ಜಿಪಿಎಸ್ ಮಾನಿಟರಿಂಗ್ ಯುನಿಟ್ ಸ್ಥಾಪಿಸಬೇಕು ಎಂದರು.
ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಮತದಾರರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ತರಬೇತಿ ಶಿಬಿರ ಹಮ್ಮಿಕೊಂಡು ಜಿಲ್ಲೆಯ ಪ್ರತಿಯೊಬ್ಬ ಮತದಾರರಿಗೂ ಇವಿಎಂ ಬಳಕೆಯ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸ್ವೀಪ್ ಕಾರ್ಯಕ್ರಮಗಳು ಅದೇ ದಿನ ತಾಲೂಕು ಕೇಂದ್ರಗಳಲ್ಲಿ ಜರುಗಬೇಕು. ನಗರ ವ್ಯಾಪ್ತಿಯಲ್ಲಿ ವಾಹನಗಳ ಮೂಲಕ ಮತಯಂತ್ರ ಬಳಕೆ ಹಾಗೂ ಮತದಾನದ ಕುರಿತು ಪ್ರಚಾರ ಮಾಡಬೇಕು, ವೋಟರ್ ಸ್ಲಿಪ್‌ಗಳನ್ನು ಸಿದ್ದಪಡಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಇದ್ದರು.
ಮತದಾರರಿಗೆ ಉಡುಗೊರೆ ನೀಡಿ ಆಮಿಷೊಡ್ಡುವುದಕ್ಕೆ ಅವಕಾಶವಿಲ್ಲ, ಉಡುಗೊರೆಗಳನ್ನು ಅನಧಿಕೃತವಾಗಿ ಅಥವಾ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ