ಜ್ವರವಿದ್ರೆ ಮಕ್ಕಳ ಪರೀಕ್ಷೆಗೂ ವಿನಾಯಿತಿ!

school mar 20
Published on

ಬೆಂಗಳೂರು: ಕರೊನಾ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಶಾಲೆಯ ಇತರ ಸಿಬ್ಬಂದಿ ಜ್ವರ, ಶೀತ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಲ್ಲಿ ಅಂತಹವರಿಗೆ ಶಾಲೆಗೆ ಹಾಜರಾಗದಂತೆ ಕಡ್ಡಾಯವಾಗಿ ಸೂಚಿಸಬೇಕೆಂದು ಆರೋಗ್ಯ ಇಲಾಖೆ ನಿರ್ದೇಶಿಸಿದೆ. ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಮಕ್ಕಳಿಗೆ ಜ್ವರದಂತಹ ಯಾವುದೇ ಲಕ್ಷಣ ಕಂಡುಬಂದಲ್ಲಿ ಪರೀಕ್ಷೆ ಇದ್ದರೂ ಕಳುಹಿಸುವುದು ಬೇಡ ಎಂದು ಪಾಲಕರಿಗೆ ಸೂಚನೆ ನೀಡಿವೆ.

ಜ್ವರ ಸೇರಿದಂತೆ ಯಾವುದೇ ಅನಾರೋಗ್ಯ ಸಮಸ್ಯೆ ಇದ್ದರೂ ಆರೋಗ್ಯ ಸುಧಾರಣೆಯಾದ ಬಳಿಕ ವೈದ್ಯರಿಂದ ಖಚಿತಪಡಿಸಿಕೊಂಡ ನಂತರವೇ ಶಾಲೆಗಳಿಗೆ ಹಿಂದಿರುಗುವಂತೆ ತಿಳಿಸಲಾಗಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲೆಯ ಇತರ ಸಿಬ್ಬಂದಿ ಕರೋನಾ ಶಂಕಿತರ ನಿಕಟ ಸಂಪರ್ಕ ಹೊಂದುವ ಸಾಧ್ಯತೆಯಿದ್ದಲ್ಲಿ ಅಂತಹವರು ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಹೂಡಿ, ಅಲ್ಲಿಂದಲೇ ಶಾಲೆಗಳಿಗೆ ಬರುವಂತೆ ಸೂಚಿಸಲಾಗಿದೆ. ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡರೂ ಅವರನ್ನು ತಕ್ಷಣವೇ ಮನೆಗೆ ಕಳುಹಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ರೋಗಕ್ಕೆ ತುತ್ತಾಗುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಕರೊನಾ ವೈರಸ್ ಪೀಡಿತ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಾರದು ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net