ಪಿಎಸ್​ಐ ತನಿಖೆಗೆ ಗ್ರಹಣ: ಸಿಐಡಿ ಮೇಲೆ ಪ್ರಭಾವಿಗಳಿಂದ ಒತ್ತಡ, ಸಾಕ್ಷ್ಯವಿದ್ರೂ ಕ್ರಮವಿಲ್ಲ!

Front
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಸಿಐಡಿ ತನಿಖೆ ಕೊಂಚ ದಿಕ್ಕು ಬದಲಾದಂತಿದೆ. ಪ್ರಭಾವಿ ರಾಜಕಾರಣಿಗಳು ತನಿಖಾಧಿಕಾರಿಗಳ ಮೇಲೆ ಭಾರಿ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ಪತ್ತೆಯಾಗಿದ್ದರೂ ಕೆಲ ಆರೋಪಿಗಳನ್ನು ಕೈಬಿಡಲು ಸಂಚು ನಡೆದಿರುವ ಆರೋಪ ಕೇಳಿಬಂದಿದೆ. ಈ ಮಧ್ಯೆ ಪಿಎಸ್​ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ 9 ಶಾಸಕರು ಪತ್ರ ಬರೆದಿರುವುದು ಇನ್ನೊಂದು ರೀತಿಯ ಅನುಮಾನಕ್ಕೆ ಕಾರಣವಾಗಿದೆ.

ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ಇನ್ನೂ ಹಲವು ಸಿಬ್ಬಂದಿ ಹಾಗೂ ಅಧಿಕಾರಿಗಳು ಬಂಧಿತರಾಗಿದ್ದಾರೆ. ಪೊಲೀಸ್ ಇಲಾಖೆಯ ಇನ್ನೂ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ಬಂಧಿತರ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಮುಖ್ಯವಾಗಿ 40 ರಿಂದ 80 ಲಕ್ಷ ರೂ. ಕೊಟ್ಟು ಬೆಂಗಳೂರಿನ ಕೇಂದ್ರದಲ್ಲೇ ಪರೀಕ್ಷೆ ಬರೆದಿದ್ದ 6 ಅಭ್ಯರ್ಥಿಗಳ ವಿರುದ್ಧ ಸ್ಪಷ್ಟ ಸಾಕ್ಷ್ಯ ಸಿಕ್ಕಿದ್ದರೂ ಪ್ರಭಾವಿಗಳಿಂದ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದಲೇ ಕೈಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೆಲ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳ ಮುಖೇನ ಅಭ್ಯರ್ಥಿಗಳು ಹಣ ಕೊಟ್ಟು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಈವರೆಗಿನ ತನಿಖೆಯಲ್ಲಿ ದೃಢವಾಗಿದೆ. ಆ ಆಧಾರದಲ್ಲೇ ಕಳ್ಳಮಾರ್ಗದಲ್ಲಿ ಎಸ್​ಐ ಆಗಲು ಹೊರಟ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆದರೆ, ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದರೂ 6 ಅಭ್ಯರ್ಥಿಗಳನ್ನು ಮಾತ್ರ ಈವರೆಗೆ ಬಂಧಿಸುವುದಿರಲಿ, ವಿಚಾರಣೆಯನ್ನೂ ಮಾಡದೆ ಪ್ರಕರಣದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಿಐಡಿ ತನಿಖಾಧಿಕಾರಿಗಳು ಈವರೆಗೆ ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ 14 ಪೊಲೀಸರು ಸೇರಿ 55 ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ, ಸಬ್ ಇನ್​ಸ್ಪೆಕ್ಟರ್, ಕಾನ್​ಸ್ಟೇಬಲ್​ಗಳು ಹಾಗೂ ಎಸ್​ಡಿಎ ಮತ್ತು ಎಫ್​ಡಿಎ ಸೇರಿದ್ದಾರೆ. ಬೆಂಗಳೂರು ಮತ್ತು ಕಲಬುರ್ಗಿ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಮಾತ್ರವೇ ಇಷ್ಟು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತ್ರ ಬರೆದ ಶಾಸಕರ್ಯಾರು?: ಪಿಎಸ್​ಐ ನೇಮಕದ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಆದರೆ, ಮರು ಪರೀಕ್ಷೆ ಬೇಡ ಎನ್ನುವ ವಾದ ಆರಂಭವಾಗಿದ್ದು, ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ 9 ಶಾಸಕರು ಪತ್ರ ಬರೆದಿದ್ದಾರೆ. ಬೇಲೂರು ಶಾಸಕ ಕೆ.ಎಸ್. ಲಿಂಗೇಶ್, ಕುಡಚಿಯ ಪಿ.ರಾಜೀವ್, ಭಟ್ಕಳದ ಸುನೀಲ್ ಬಿ. ನಾಯ್್ಕ ಉಡುಪಿಯ ಕೆ. ರಘುಪತಿ ಭಟ್, ಸೇಡಂನ ರಾಜ್​ಕುಮಾರ್ ಪಾಟಿಲ್ ತೇಲ್ಕೂರ, ಕಾಪುವಿನ ಲಾಲಾಜಿ ಆರ್. ಮೆಂಡನ್, ಬೆಳ್ತಂಗಡಿಯ ಹರೀಶ್ ಪೂಂಜಾ, ಕಂಪ್ಲಿಯ ಜೆ.ಎನ್. ಗಣೇಶ್ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಪರೀಕ್ಷೆ ರದ್ದು ಮಾಡಬಾರದು. ಸಿಐಡಿ ತನಿಖೆ ಪೂರ್ಣವಾಗುವ ಮೊದಲೇ ಪರೀಕ್ಷೆ ರದ್ದು ಮಾಡಿರುವುದರಿಂದ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ. ಹೀಗಾಗಿ ಮರುಪರೀಕ್ಷೆ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

19 ಪ್ರಶ್ನೆಗೆ ಒಬ್ಬರಿಂದಲೇ ಉತ್ತರ!?: ಬಂಧಿತ ಅಭ್ಯರ್ಥಿಗಳ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಪ್ರತಿಗಳನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ಕಳುಹಿಸಲಾಗಿತ್ತು. ಬಂಧನಕ್ಕೊಳಗಾದ ಎಲ್ಲ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆಯಲ್ಲಿ ನಿರ್ದಿಷ್ಟವಾದ 19 ಪ್ರಶ್ನೆಗಳಿಗೆ ಒಂದೇ ಶಾಯಿಯಿಂದ ಉತ್ತರಿಸಿರುವುದು ಎಫ್​ಎಸ್​ಎಲ್ ವರದಿಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಅಂಶವನ್ನು ಸಿಐಡಿ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸಿದೆ. ಈ ಕುರಿತು ಬಂಧಿತ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆಸಿದೆ. ಸಿಐಡಿ ಇದುವರೆಗೆ ಪ್ರಕರಣದ ತನಿಖೆಯಲ್ಲಿ ಸಾವಿರಾರು ಕರೆಗಳ ಜಾಡು ಸಂಗ್ರಹಿಸಿದೆ. ಡೀಲ್​ನಲ್ಲಿ ಶಾಮೀಲಾಗಿರುವ ಹಲವರು ಪೊಲೀಸ್ ಇಲಾಖೆ ಸಿಬ್ಬಂದಿಯ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಗಿದೆ. ಸಿಕ್ಕಿಬಿದ್ದ ಆರೋಪಿಗಳು ಸಿಐಡಿಗೆ ಸುಳಿವು ಸಿಗದಂತೆ ಮೊಬೈಲ್​ನಲ್ಲಿದ್ದ ಸಂದೇಶ, ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಅವರ ಮೊಬೈಲ್​ಗಳನ್ನು ಎಫ್​ಎಸ್​ಎಲ್​ನಲ್ಲಿ ರಿಟ್ರೀವ್ ಮಾಡಲಾಗುತ್ತಿದೆ.

ಪಿಎಸ್​ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ತನಿಖೆ ಮುಂದುವರಿದಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು. ಬೆಳಗಾವಿ ಜಿಲ್ಲೆ ಗೋಕಾಕ್​ನಲ್ಲೂ ಒಂದು ಗ್ಯಾಂಗ್ ಇದೆ. ಅವರ ಡೇಟಾ ಬೇಸ್ ರೆಡಿ ಮಾಡಬೇಕು. ವಿಜಯಪುರ, ಬಾಗಲಕೋಟೆಯಲ್ಲೂ ಕೆಲ ಜನರಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ರೇಂಜ್​ನಲ್ಲಿ ಬಹಳಷ್ಟು ಜನರಿದ್ದು ಅವರನ್ನು ಗುರುತಿಸಬೇಕು. ಅವರ ಚಟುವಟಿಕೆಗಳ ನಿಗಾ ವಹಿಸುವಂತೆ ಸೂಚಿಸಲಾಗಿದೆ. | ಅಲೋಕ್ ಕುಮಾರ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ

ಎಡಿಜಿಪಿಗೆ ಮತ್ತೆ ನೋಟಿಸ್ ಕೊಡದ ಸಿಐಡಿ: ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ (ಈಗ ಐಎಸ್​ಡಿ ಎಡಿಜಿಪಿ) ಅಮೃತ್ ಪೌಲ್ ಅವರನ್ನು 2 ದಿನ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದರು. ಸಮರ್ಪಕವಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ವೈಯಕ್ತಿಕ ಕಾರಣ ಕೊಟ್ಟು ಎಡಿಜಿಪಿ 3ನೇ ಬಾರಿಯ ವಿಚಾರಣೆಗೆ ಗೈರು ಹಾಜರಾಗಿದ್ದರು. ಸಿಐಡಿ ಅಧಿಕಾರಿಗಳು ಮತ್ತೆ ನೋಟಿಸ್ ಕೊಡದೆ ಸುಮ್ಮನಾಗಿದ್ದಾರೆ.

ಬಲವಾದ ಸಾಕ್ಷ್ಯ ಉಲ್ಲೇಖಿಸಬೇಡಿ: ಪ್ರಭಾವಿಗಳು ಹಾಗೂ ಕೆಲ ರಾಜಕಾರಣಿಗಳು ನಿರಂತರವಾಗಿ ಸಿಐಡಿ ತನಿಖಾಧಿಕಾರಿಗಳನ್ನು ಸಂರ್ಪಸಿ ತಮ್ಮ ಆಪ್ತರನ್ನು ಪ್ರಕರಣದಿಂದ ಕೈ ಬಿಡುವಂತೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂದು ಸಿಐಡಿ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಬಂಧನಕ್ಕೊಳಗಾದ ಕೆಲ ಮಧ್ಯವರ್ತಿಗಳು, ಅಭ್ಯರ್ಥಿಗಳ ವಿರುದ್ಧ ಚಾರ್ಜ್​ಶೀಟ್​ನಲ್ಲಿ ಬಲವಾದ ಸಾಕ್ಷ್ಯಗಳನ್ನು ಉಲ್ಲೇಖಿಸದಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲು ಸಿಐಡಿ ಮುಂದಾಗಿದೆ. ರಾಜ್ಯದ ಇತರ ಕೆಲ ಪ್ರಮುಖ ಹಗರಣಗಳಂತೆಯೇ ಪಿಎಸ್​ಐ ಪ್ರಕರಣದ ತನಿಖೆಯೂ ಹಳ್ಳಹಿಡಿಯುವ ಲಕ್ಷಣ ಗೋಚರಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net