ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ಒಳಹರಿವು ಹೆಚ್ಚಳ

anjanapura
ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಕೋಡಿ ಬಿದ್ದಿರುವುದು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಬುಧವಾರ ಈ ಎರಡೂ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯ ಉಳಿದ ಭಾಗಗಳಲ್ಲಿ ತುಂತುರು ಕೆಲವೊಮ್ಮೆ ರಭಸವಾಗಿ ಮಳೆಯಾಗುತ್ತಿದೆ.

ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 24 ತಾಸಿನಲ್ಲಿ ಸುಮಾರು ಮೂರು ಅಡಿ ನೀರು ಸಂಗ್ರಹವಾಗಿದೆ. ಭದ್ರಾ ಜಲಾಶಯಕ್ಕೆ ಎರಡು ಅಡಿ ನೀರು ಹರಿದು ಬಂದಿದೆ. ತುಂಗಾ ಜಲಾಶಯ ಭರ್ತಿಯಾಗುವ ಹಂತದಲ್ಲಿ ಇರುವುದರಿಂದ ಜಲಾಶಯಕ್ಕೆ ಹರಿದು ಬರುವ ಅಷ್ಟೂ ನೀರನ್ನು ನದಿಗೆ ಬಿಡಲಾಗುತ್ತಿದೆ.

ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ನಿರಂತರ ಮಳೆಯಿಂದ ಅಡಕೆ ಬೆಳೆಗಾರರು ಚಿಂತೆ ಮಾಡುವಂತಾಗಿದೆ. ಒಂದೆಡೆ ಎಲೆಚುಕ್ಕೆ ರೋಗ, ಮತ್ತೊಂದೆಡೆ ಕೊಳೆರೋಗ ತಗುಲುವ ಆತಂಕ ಎದುರಾಗಿದೆ. ಔಷಧ ಸಿಂಪಡಣೆಗೂ ವರುಣ ಅವಕಾಶ ನೀಡುತ್ತಿಲ್ಲ.

ಮಂಗಳವಾರ ಬೆಳಗ್ಗೆಗೆ ಕೊನೆಗೊಂಡಂತೆ 24 ತಾಸಿನಲ್ಲಿ ಶಿವಮೊಗ್ಗದಲ್ಲಿ 9.10 ಮಿ.ಮೀ, ಭದ್ರಾವತಿ 5.30, ತೀರ್ಥಹಳ್ಳಿ 72.70, ಸಾಗರ 44.40, ಶಿಕಾರಿಪುರ 7, ಸೊರಬ 27.90 ಹಾಗೂ ಹೊಸನಗರ ತಾಲೂಕಿನಲ್ಲಿ ಅತ್ಯಧಿಕ 76.40 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಇನ್ನೂ ಮೂರ‌್ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಬಿಡುವು ನೀಡಿದ ಬಳಿಕ ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net