

ನವದೆಹಲಿ: ಪ್ರಸಕ್ತ ವರ್ಷದ ಜೂನ್ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ. 2.1ಕ್ಕೆ ಇಳಿದಿದ್ದು ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಮುಂಗಾರು ಮಳೆ ವ್ಯಾಪಕವಾಗಿ ಬಿದ್ದಿರುವ ಕಾರಣ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಚಿಲ್ಲರೆ ಹಣದುಬ್ಬರ 2025ರ ಮೇ ತಿಂಗಳಲ್ಲಿ ಶೇ. 2.82 ಇತ್ತು. 2024ರ ಜೂನ್ನಲ್ಲಿ ಶೇ. 5.08ರಷ್ಟಿತ್ತು. 2024ರ ನವೆಂಬರ್ನಿಂದ ಇದು ಇಳಿಮುಖವಾಗಿದೆ. ಇದಕ್ಕೆ ಮುಖ್ಯವಾಗಿ ತರಕಾರಿ, ದ್ವಿದಳ ಧಾನ್ಯ, ಮಾಂಸ, ಮೀನು, ಸಕ್ಕರೆ, ಸಿಹಿತಿಂಡಿಗಳು, ಹಾಲು, ಹಾಲಿನ ಉತ್ಪನ್ನಗಳು ಮತ್ತು ಮಸಾಲೆಗಳ ದರ ಕಡಿಮೆಯಾಗಿರುವುದು ಕಾರಣ ಎಂದು ಎನ್ಎಸ್ಒ ತಿಳಿಸಿದೆ. ಹಣದುಬ್ಬರವನ್ನು ಶೇ. 4ಕ್ಕಿಂತ ಕಡಿಮೆ ಮಟ್ಟದಲ್ಲಿ ಇರಿಸುವ ಹೊಣೆಯನ್ನು ಆರ್ಬಿಐಗೆ ವಹಿಸಲಾಗಿತ್ತು. ಅದು ಸಾಲದ ಬಡ್ಡಿ ದರವನ್ನು 100 ಮೂಲಾಂಶದಷ್ಟು ಇಳಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಿದೆ.
ಸಗಟು ಹಣದುಬ್ಬರ ಮೈನಸ್: ಇದೇ ವೇಳೆ, ಸಗಟು ಹಣದುಬ್ಬರ ಜೂನ್ನಲ್ಲಿ ಶೇ. 0.13ರಷ್ಟು ಇಳಿಕೆಯಾಗುವ ಮೂಲಕ 19 ತಿಂಗಳ ನಂತರ ಋಣಾತ್ಮಕವಾಗಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಮೇನಲ್ಲಿ ಶೇ. 0.39ರಷ್ಟಿತ್ತು. ಕಳೆದ ವರ್ಷದ ಜೂನ್ನಲ್ಲಿ ಇದು ಶೇ. 3.43ರಷ್ಟಿತ್ತು. ಈ ಇಳಿಕೆಗೆ ಆಹಾರ ಪದಾರ್ಥ, ಇಂಧನ, ಲೋಹ, ಕಚ್ಚಾ ತೈಲ, ಅನಿಲ ಮುಂತಾದವುಗಳ ಬೆಲೆ ಕಡಿಮೆಯಾಗಿರುವುದು ಕಾರಣ ಎಂದು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಸಗಟು ಬೆಲೆ ಸೂಚ್ಯಂಕ ಮಾಹಿತಿ ಪ್ರಕಾರ, ಮೇನಲ್ಲಿ ಶೇ. 1.56ರಷ್ಟು ಇಳಿದಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಜೂನ್ನಲ್ಲಿ 3.75ರಷ್ಟು ಇಳಿದಿದೆ. 2024ರ ಜೂನ್ಗೆ ಹೋಲಿಸಿದರೆ, 2025ರ ಜೂನ್ನಲ್ಲಿ ಶೇ. (ಮೈನಸ್) 1.06ರಷ್ಟಾಗಿದೆ. 2025ರ ಮೇ ತಿಂಗಳಿಗೆ ಹೋಲಿಸಿದರೆ ಜೂನ್ನಲ್ಲಿ 205 ಮೂಲಾಂಶದಷ್ಟು ಕಡಿಮೆಯಾಗಿದೆ. ಜೂನ್ನಲ್ಲಿ ದಾಖಲಾದ ಆಹಾರ ಹಣದುಬ್ಬರವು 2019ರ ನಂತರದ ಅವಧಿಯಲ್ಲೇ ಅತ್ಯಂತ ಕಡಿಮೆ.
ಗ್ರಾಮೀಣ ಭಾಗದ ಹಣದುಬ್ಬರವು ರಾಷ್ಟ್ರೀಯ ಸರಾಸರಿಗಿಂತ ಶೇ. 1.72ರಷ್ಟು ಕಡಿಮೆಯಾಗಿದೆ. ಆದರೆ ನಗರ ಪ್ರದೇಶಗಳಿ ಗಿಂತ ಶೇ. 2.56ರಷ್ಕು ಹೆಚ್ಚಾಗಿದೆ. ಅತಿ ಕಡಿಮೆ ಹಣದುಬ್ಬರ ಕಂಡುಬಂದಿದ್ದು ತೆಲಂಗಾಣದಲ್ಲಿ (ಶೇ. - 0.93), ಅತಿ ಹೆಚ್ಚು ಹಣದುಬ್ಬರ ದಾಖಲಾಗಿದ್ದು ಕೇರಳದಲ್ಲಿ (ಶೇ. 6.71). ಅಖಿಲ ಭಾರತದ ಮಟ್ಟದಲ್ಲಿ ವಾರ್ಷಿಕ ಹಣದುಬ್ಬರವು ತರಕಾರಿಯಲ್ಲಿ (ಮೈನಸ್ ಶೇ. 19), ಮೀನು ಮತ್ತು ಮಾಂಸದಲ್ಲಿ (ಮೈನಸ್ ಶೇ. 1.62), ದ್ವಿದಳಧಾನ್ಯ ಮತ್ತು ಸಂಬಂಧಿಸಿದ ಉತ್ಪನ್ನಗಳಲ್ಲಿ (ಮೈನಸ್ ಶೇ. 11.76) ಮತ್ತು ಸಂಬಾರ ಪದಾರ್ಥಗಳಲ್ಲಿ (ಮೈನಸ್ ಶೇ. 3.03) ಋಣಾತ್ಮಕವಾಗಿದೆ.