

ಬೆಂಗಳೂರು/ಮುಂಬೈ: ಇನ್ಪೋಸಿಸ್ ಕಂಪನಿ ಇತ್ತೀಚೆಗೆ ಪ್ರತಿ ಷೇರಿಗೆ 43 ರೂ. ಲಾಭಾಂಶ ಘೊಷಿಸಿದ್ದು, ಇದರಿಂದಾಗಿ 54.2 ಕೋಟಿ ಷೇರುಗಳನ್ನು ಹೊಂದಿರುವ ಕಂಪನಿಯ ಪ್ರಮೋಟರ್ಗಳಿಗೆ 2,330 ಕೋಟಿ ರೂ. ದೊರೆಯಲಿದೆ. ಕಂಪನಿಯ ಒಟ್ಟು ಷೇರುಗಳ ಪೈಕಿ ಶೇ. 14.6ರಷ್ಟು ಷೇರುಗಳು ಪ್ರಮೋಟರ್ಗಳ ಬಳಿ ಇವೆ. 2024-25ರ ಆರ್ಥಿಕ ವರ್ಷಕ್ಕೆ ಕಂಪನಿ ಪ್ರತಿ ಷೇರಿಗೆ 21 ರೂ. ಮಧ್ಯಂತರ ಲಾಭಾಂಶ ಸೇರಿದಂತೆ 43 ರೂ.ಗಳ ಲಾಭಾಂಶ ಪ್ರಕಟಿಸಿದೆ. 2023-24ರಲ್ಲಿ ನೀಡಿದ್ದ 1,527 ಕೋಟಿ ರೂ. ಲಾಭಾಂಶಕ್ಕೆ ಹೋಲಿಸಿದರೆ, ಈ ಬಾರಿಯದು ಶೇ. 52ರಷ್ಟು ಏರಿಕೆಯಾಗಿದೆ. ಕಂಪನಿಯ ಅಧ್ಯಕ್ಷ ನಂದನ್ ನಿಲೇಕಣಿ ಅವರ ಬಳಿ 4 ಕೋಟಿ ಷೇರುಗಳಿದ್ದು, ಲಾಭಾಂಶದ ರೂಪದಲ್ಲಿ 175 ಕೋಟಿ ರೂ. ಬರಲಿದೆ.
ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಬಳಿ 1.5 ಕೋಟಿ ಷೇರುಗಳಿದ್ದು, ಅವರಿಗೆ 65 ಕೋಟಿ ರೂ. ಲಾಭಾಂಶ ಬರಲಿದೆ. ಕ್ರಿಸ್ ಗೋಪಾಲಕೃಷ್ಣ ಬಳಿ 3.2 ಕೋಟಿ ಷೇರುಗಳಿದ್ದು, 137 ಕೋಟಿ ರೂ. ಲಾಭಾಂಶ ಪಡೆಯಲಿದ್ದಾರೆ. ಸುಧಾ ಗೋಪಾಲಕೃಷ್ಣನ್ ಬಳಿ 9.5 ಕೋಟಿ ಷೇರುಗಳಿದ್ದು, ಅವರಿಗೆ 410 ಕೋಟಿ ರೂ. ಲಾಭಾಂಶ ಸಿಗಲಿದೆ. ನಾರಾಯಣಮೂರ್ತಿ ಅವರ ಮಗ ರೋಹನ್ ಬಳಿ 6 ಕೋಟಿ ಷೇರುಗಳಿದ್ದು 261.5 ಕೋಟಿ ಲಾಭಾಂಶ ಪಡೆಯಲಿದ್ದಾರೆ. ಮಗಳು ಅಕ್ಷತಾ ಮೂರ್ತಿ ಬಳಿ 3.8 ಕೋಟಿ ಷೇರುಗಳಿದ್ದು, 167 ಕೋಟಿ ರೂ. ಲಾಭಾಂಶ ದೊರೆಯಲಿದೆ. ಪ್ರವರ್ತಕರ ಮೂರನೇ ಪೀಳಿಗೆಯೂ ಈಗ ಬೆಳಕಿಗೆ ಬರುತ್ತಿದ್ದು, ಕೆಲವು ಮೊಮ್ಮಕ್ಕಳು ಗಮನಾರ್ಹ ಪಾಲು ಪಡೆಯುತ್ತಿದ್ದಾರೆ. ಅವರ ಪೈಕಿ, ನಿಕಿತಾ ಮತ್ತು ಮಿಲನ್ ಶಿಬುಲಾಲ್ ಮನ್ಚಂದಾ ತಲಾ 26.3 ಕೋಟಿ ರೂ. ಲಾಭಾಂಶ ಪಡೆಯಲಿದ್ದಾರೆ. ತನುಷ್ ನಿಲೇಕಣಿ ಚಂದ್ರ 14 ಕೋಟಿ ರೂ., ಏಕಾಗ್ರಹ್ ರೋಹನ್ ಮೂರ್ತಿ 6.5 ಕೋಟಿ ರೂ. ಲಾಭಾಂಶ ತಮ್ಮದಾಗಿಸಿಕೊಳ್ಳಲಿದ್ದಾರೆ.