

ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿ. ಭಾರತ ಮಾತ್ರವಲ್ಲ ಅತಿ ಹೆಚ್ಚು ಪ್ರಕರಣ ಹೊಂದಿರುವ ಐದು ದೇಶಗಳಲ್ಲಿ ಕೂಡ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಯಾವುದೇ ದೇಶಗಳಲ್ಲಿ ಸಾವಿನ ಪ್ರಮಾಣದಲ್ಲಿ ಇಳಿಕೆ ಆಗಿಲ್ಲ. ಬದಲಿಗೆ ಅದು ಏರುತ್ತಲೇ ಇದೆ. ಸೋಂಕಿತರು ಗುಣಮುಖರಾಗುತ್ತಿರುವ ಪ್ರಮಾಣ ಮಾತ್ರ ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತದಲ್ಲಿ ಉತ್ತಮವಾಗಿರುವುದು ಸಮಾಧಾನದ ಸಂಗತಿ.
ಸಾವಿನ ಪ್ರಮಾಣ ಹೆಚ್ಚಳ?: ಪ್ರತಿದಿನ ಹೊಸ ಪ್ರಕರಣಗಳ ಪತ್ತೆಯಾಗುತ್ತಿರುವ ಪ್ರಮಾಣದಲ್ಲೇ ಸಾವಿನ ಪ್ರಮಾಣವೂ (ಕೇಸ್ ಫಟಾಲಿಟಿ) ಕಡಿಮೆಯಾಗದಿರುವದರಿಂದ ಈ ಎರಡರ ನಡುವಿನ ಅನುಪಾತ ಹೆಚ್ಚುತ್ತಿದೆ. ಕೇಸ್ ಫಟಾಲಿಟಿ ದರವು ಯಾವುದೇ ರೋಗದ ತೀವ್ರತೆ ಅಳೆಯಲು ಬಳಸಲಾಗುವ ಮಾನದಂಡ. ವ್ಯಾಧಿ ಮುಂದೆ ಯಾವ ರೀತಿಯಲ್ಲಿ ಸಾಗಬಹುದು ಎನ್ನುವುದನ್ನು ಅರಿಯಲು ಹಾಗೂ ಹೊಸ ಚಿಕಿತ್ಸೆಯ ಪರಿಣಾಮ ಅಳೆಯಲು ಕೂಡ ಇದನ್ನು ಮಾನದಂಡ ವಾಗಿ ಬಳಸಲಾಗುತ್ತದೆ. ವ್ಯಾಧಿ ಉಲ್ಬಣವಾಗುವುದು ಮುಂದುವರಿಯುತ್ತಲೇ ಇರುವುದರಿಂದ ಕೇಸ್ ಫಟಾಲಿಟಿಯ ಹಾಲಿ ಲೆಕ್ಕಾಚಾರಗಳು ಒಂದು ಸ್ಪಷ್ಟ ಚಿತ್ರಣ ನೀಡಲು ಸಮರ್ಥವಾದೀತೇ ಎನ್ನುವ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ.
ಲೆಕ್ಕಾಚಾರ: ಕೋವಿಡ್-19ರ ತೀವ್ರತೆಯನ್ನು ಅಳೆಯಲು ಮುಕ್ತಾಯಗೊಳಿಸಿದ ಪ್ರಕರಣಗಳಲ್ಲಿ ಸಾವಿನ ದರವನ್ನು ಇನ್ನೊಂದು ಮಾನದಂಡವಾಗಿ ಬಳಸಲಾಗುತ್ತದೆ. ಮುಕ್ತಾಯ ಗೊಳಿಸಿದ ಪ್ರಕರಣವೆಂದರೆ ಯಾವುದೇ ಒಂದು ಖಚಿತ ಫಲಿತಾಂಶ ಬಂದಿರುವ ಪ್ರಕರಣ. ಅಂದರೆ ರೋಗಿ ಗುಣಮುಖರಾಗಿರಬೇಕು ಅಥವಾ ಮೃತಪಟ್ಟಿರಬೇಕು. ಇದು ಹೊಸ ಪ್ರಕರಣಗಳಲ್ಲಿನ ಸಕ್ರಿಯ ಕೇಸ್ಗಳನ್ನು ಒಳಗೊಂಡಿರುವುದಿಲ್ಲ, ಆದರೆ ಒಟ್ಟು ಪ್ರಕರಣಗಳ ಭಾಗವಾಗಿರುತ್ತದೆ. ಭಾರತದಲ್ಲಿ ಮುಕ್ತಾಯಗೊಂಡ ಪ್ರತಿ ಹತ್ತು ರೋಗಿಗಳಲ್ಲಿ ಸುಮಾರು ಎಂಟು ಪ್ರಕರಣ ಗುಣಮುಖವಾಗಿದ್ದಕ್ಕೆ ಸಂಬಂಧಿಸಿದ್ದಾಗಿವೆ. ಉಳಿದ ಇಬ್ಬರು ಮೃತಪಟ್ಟಿದ್ದಾರೆ. ಭಾರತದಲ್ಲಿ ಗುಣಮುಖರಾದ ದರ ಶೇಕಡಾ 83.6 ಆಗಿದ್ದು ಜಾಗತಿಕ ದರವಾದ ಶೇಕಡಾ 79.1ಕ್ಕಿಂತ ಹೆಚ್ಚಾಗಿದೆ.
ಜಗತ್ತಿನಲ್ಲೇ ಕೇರಳ ಬೆಸ್ಟ್!: ರೋಗಿಗಳು ಗುಣಮುಖವಾಗುವ ಪ್ರಮಾಣದಲ್ಲಿ ಕೇರಳ ಇತರೆಲ್ಲ ರಾಜ್ಯಗಳಿಗಿಂತ ಮುಂದಿದೆ. ಕನಿಷ್ಠ 100 ಮುಗಿದ ಕೇಸ್ಗಳು ಕೇರಳದಲ್ಲಿದ್ದು ಅತಿ ಹೆಚ್ಚು ಗುಣಮುಖ ದರ ಹೊಂದಿದೆ. ಮುಕ್ತಾಯಗೊಂಡ ಪ್ರಕರಣಗಳಲ್ಲಿ ಕೇವಲ ಶೇಕಡಾ 1.1 ಮರಣ ಪ್ರಮಾಣ ಹೊಂದಿರುವ ಕೇರಳದ ಸಾಧನೆ ಜಗತ್ತಿನಲ್ಲೇ ಅತ್ಯುತ್ತಮ ಎಂದು ಹೇಳಲಾಗಿದೆ. ಕೇರಳದಲ್ಲಿ ಇಳಿಕೆ
ಕೋವಿಡ್-19 ಪ್ರಕರಣ ಕಡಿಮೆ ಮಾಡುವಲ್ಲಿ ಕೇರಳ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ವಿಚಾರದಲ್ಲಿ ಕಳೆದ ವಾರ ಮುಂಚೂಣಿಯಲ್ಲಿದ್ದ ಈ ರಾಜ್ಯದಲ್ಲಿ ಇಳಿಕೆ ದರ ಇನ್ನಷ್ಟು ಹೆಚ್ಚಿದೆ. ದೇಶದಲ್ಲಿ ಕರೊನಾ ವೈರಸ್ ಹಾವಳಿಯ ಆರಂಭಿಕ ಘಟ್ಟದಲ್ಲಿ ಹೆಚ್ಚು ಪ್ರಕರಣಗಳಿಂದ ದೇಶದ ಗಮನ ಸೆಳೆದಿದ್ದ ಪುಟ್ಟ ರಾಜ್ಯ ಕೇರಳ, ಇದೀಗ ಪ್ರಕರಣಗಳ ಇಳಿಕೆಯಿಂದಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಎಲ್ಲಿ ಇಳಿಕೆ?
ರಾಜಸ್ಥಾನ, ದೆಹಲಿ, ಬಿಹಾರ ಹಾಗೂ ಜಮ್ಮು-ಕಾಶ್ಮೀರದಲ್ಲಿ ಕಳೆದ ಏಳು ದಿನಗಳಲ್ಲಿ ದೈನಿಕ ಹೊಸ ಪ್ರಕರಣಗಳ ಏರಿಕೆಯಲ್ಲಿ ಇಳಿಮುಖ ದಾಖಲಾಗಿದೆ. ಈಗಾಗಲೇ ಏರಿಕೆ ಪ್ರಮಾಣ ನಿಯಂತ್ರಿಸುವಲ್ಲಿ ಸಫಲವಾದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆ ಮಟ್ಟವನ್ನು ಹಾಗೇ ಉಳಿಸಿಕೊಂಡಿವೆ.