ರಾಜ್ಯಾದ್ಯಂತ ಆ. 7ರಿಂದ ‘ಮಿಷನ್ ಇಂದ್ರಧನುಷ್ 5.0’ ಲಸಿಕಾ ಅಭಿಯಾನ

Dinesh gundurao
Published on

ಬೆಂಗಳೂರು: ರಾಜ್ಯಾದ್ಯಂತ ಆ. 7ರಿಂದ ಮೂರು ಸುತ್ತುಗಳಲ್ಲಿ ‘ಮಿಷನ್ ಇಂದ್ರಧನುಷ್ 5.0’ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಆರೋಗ್ಯ ಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದಡಿ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ, ರುಬೆಲ್ಲಾ ಲಸಿಕೆ ಸೇರಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿನ ಎಲ್ಲಾ ಲಸಿಕೆಗಳನ್ನು ನೀಡಲಾಗುತ್ತದೆ. ಈ ಲಸಿಕಾ ಕಾರ್ಯಕ್ರಮವನ್ನು ಬಲಪಡಿಸಲು ಜಿಲ್ಲೆಗಳನ್ನು ಹೆಚ್ಚಿನ ಅಪಾಯದ, ಮಧ್ಯಮ ಅಪಾಯದ ಹಾಗೂ ಕಡಿಮೆ ಅಪಾಯದ ಎಂದು ವಿಂಗಡಿಸಲಾಗಿದೆ ಎಂದರು.

ಅಭಿಯಾನದಲ್ಲಿ 5 ವರ್ಷದೊಳಗಿನ 1.65 ಲಕ್ಷ ಮಕ್ಕಳಿಗೆ ಹಾಗೂ 32,917 ಗರ್ಭಿಣಿಯರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ 1.03 ಲಕ್ಷ ಮಕ್ಕಳು ಹಾಗೂ 19,797 ಗರ್ಭಿಣಿಯರು ಹೆಚ್ಚಿನ ಅಪಾಯದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಬಾಗಲಕೋಟೆ, ಬಳ್ಳಾರಿ, ಬಿಬಿಎಂಪಿ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯನ್ನು ಹೆಚ್ಚಿನ ಅಪಾಯದ ಜಿಲ್ಲೆಗಳೆಂದು ಗುರುತಿಸಲಾಗಿದೆ ಎಂದು ಹೇಳಿದರು.

ಇ-ಪ್ರಮಾಣ ಪತ್ರ ವಿತರಣೆ: ಆ.7ರಿಂದ 12, ಸೆ.11ರಿಂದ 16 ಹಾಗೂ ಅ.9ರಿಂದ 14ರವರೆಗೆ ಈ ಲಸಿಕಾ ಅಭಿಯಾನ ನಡೆಯಲಿದೆ. ಫಲಾನುಭವಿಗಳು ಖಿಐಘೆ ಪೋರ್ಟಲ್ ಮೂಲಕ ಲಸಿಕಾಕರಣಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಲಸಿಕೆ ಪಡೆದ ಬಳಿಕ ಇ - ಪ್ರಮಾಣ ಪತ್ರ ನೀಡಲಾಗುತ್ತದೆ. ಅಭಿಯಾನದಲ್ಲಿ ಅಭಿವೃದ್ಧಿ ಹೊಂದದ ಪ್ರದೇಶಗಳು, ಸಾರ್ವತ್ರಿಕ ಲಸಿಕಾ ಅಭಿಯಾನ ನಡೆಯದ ಹಳ್ಳಿಗಳು, ವಲಸಿಗರು ಇರುವ ನಗರ ಪ್ರದೇಶ, ಅಲೆಮಾರಿಗಳು ವಾಸಿಸುವ ಪ್ರದೇಶಗಳು, ಮೀನುಗಾರರು ವಾಸಿಸುವ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಸಾಂಕ್ರಾಮಿಕ ರೋಗಗಳು ವರದಿಯಾದ ಪ್ರದೇಶ ಸೇರಿ ಹೆಚ್ಚಿನ ಅಪಾಯದಲ್ಲಿರುವ ಪ್ರದೇಶಗಳನ್ನು ಕೇಂದ್ರೀಕರಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net